ಇವರ ದಾರಿಯೇ ಡಿಫರೆಂಟುಏಕಾಂಗಿ ಸಂಚಾರಿವಿಂಗಡಿಸದಸ್ಫೂರ್ತಿ ಗಾಥೆ

ಕೊರೋನಾ ಜಾಗೃತಿ ಮೂಡಿಸಲು ದಿನವೂ ೧೦ ಕಿಮೀ ಚಾರಣ ಮಾಡುವ, ಆಶಾ ಕಾರ್ಯಕರ್ತೆ ಸುಮನ್ ಧೇಬೇ

‘ಕೊರೋನಾ ವಾರಿಯರ್ಸ್’ ಸಾಲಿನಲ್ಲಿ ವೈದ್ಯರು, ದಾದಿಯರೊಡನೆ, ಆಶಾ ಕಾರ್ಯಕರ್ತೆಯರು ಪ್ರಮುಖವಾಗಿ ಎದ್ದು ನಿಲ್ಲುತ್ತಾರೆ. ಊರಿನ, ಊರಿನ ಜನತೆಯ ಯೋಗಕ್ಷೇಮಕ್ಕಾಗಿ ಕಿಮೀಗಟ್ಟಲೆ ನಡೆದು, ಅವರಲ್ಲಿ ಕೊರೋನಾ ಕುರಿತ ಜಾಗೃತಿ ಮೂಡಿಸಿದ ದಿಟ್ಟೆ ಆಶಾ ಕಾರ್ಯಕರ್ತೆ ಸುಮನ್ ಧೇಬೇ ಸ್ಫೂರ್ತಿಗಾಥೆಯಿದು!

  • ವರ್ಷಾ ಉಜಿರೆ

ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟು ಯಾರೂ, ಎಂದೂ ಊಹಿಸಿದ ಪರಿಸ್ಥಿತಿ. ಒಂದನೇ ಅಲೆಯ ಸಮಯದಲ್ಲಿ ಭಯದಿಂದಲೇ ದಿನದೂಡಿದ್ದ ನಾವು, ಎರಡನೇ ಅಲೆಯ ಭೀಕರ ಪರಿಸ್ಥಿತಿ ಮತ್ತು ಮೂರನೇ ಅಲೆಯ ನಡುವಿನ ಈ ಸಮಯದಲ್ಲಿ, ಕೊರೋನಾ ಪರಿಸ್ಥಿತಿಯೊಂದಿಗೆ ಜೀವಿಸುವುದನ್ನು ಕಲಿತಿದ್ದೇವೆ.

ಇಂತಹ ಪರಿಸ್ಥಿಯಲ್ಲಿಯೂ ನಮ್ಮನ್ನು, ದೇಶವನ್ನು ರಕ್ಷಿಸಲು ಪಣತೊಟ್ಟವರಲ್ಲಿ ವೈದ್ಯರು, ದಾದಿಯರು, ಪೊಲೀಸರ ಜೊತೆಗೆ ನಾವು ನೆನಪಿಸಿಕೊಳ್ಳಲೇಬೇಕಾದವರಲ್ಲಿ ‘ಆಶಾ ಕಾರ್ಯಕರ್ತೆ’ಯರೂ ಇದ್ದಾರೆ. ಆಶಾ ಕಾರ್ಯಕರ್ತೆಯರ ಕೆಲಸ, ಸಾಮರ್ಥ್ಯ ಸಾಮಾನ್ಯದ್ದಲ್ಲವೆಂದು ಅವರು ಸಾಧಿಸಿ ತೋರಿಸಿದ್ದಾರೆ. ಅಂತಹದ್ದೇ ಒಬ್ಬ ಸಾಧಕಿಯ ಕಥೆಯಿದು!

ಸುಮನ್ ಧೇಬೇ, ಪುಣೆ ಜಿಲ್ಲಾ ಪರಿಷದ್ ವ್ಯಾಪ್ತಿಯ ಆಶಾ ಕಾರ್ಯಕರ್ತೆ. ಕೊರೋನಾ ಎರಡನೇ ಅಲೆಯಿಂದ ಐದು ಗ್ರಾಮಗಳನ್ನು ಉಳಿಸಲು ದಿನಕ್ಕೆ ಹತ್ತು ಗಂಟೆ ಚಾರಣ ಮಾಡಿ, ಅವರಲ್ಲಿ ಜಾಗೃತಿ ಮೂಡಿಸಿದ ಗಟ್ಟಿಗಿತ್ತಿ.

ಈ ಕಥೆ ಆರಂಭವಾಗಿದ್ದು ಹೀಗೆ…

ಜುಲೈ ೨೦೨೦ರಲ್ಲಿ ಪುಣೆ ಜಿಲ್ಲಾ ವ್ಯಾಪ್ತಿಯ ಮಾನಗಾಂವ್ (Mangaon) ಎಂಬಲ್ಲಿಯ ಅಲೆಮಾರಿ ಜನಾಂಗದ ಇಬ್ಬರಿಗೆ ಕೋವಿಡ್-19 ದೃಢವಾಗುತ್ತದೆ. ಚಿಕಿತ್ಸೆಯ ನಂತರ ಅವರಿಬ್ಬರೂ ತಮ್ಮ ವಾಸಸ್ಥಳಗಳಿಂದ ದೂರ ತೆರಳುತ್ತಾರೆ. ಇದು ಸುಮನ್ ಧೇಬೇ ಅವರಿಗೆ ಸಂಬಂಧಪಟ್ಟ ವರದಿಯಾಗಿರುವುದರಿಂದ, ಅವರಿಬ್ಬರಿಗೆೆ ಸಾಂಕ್ರಾಮಿಕ ರೋಗ ಹರಡಿದ ಮೂಲ ಸಂಪರ್ಕ ಪತ್ತೆ ಮಾಡುವ ಜವಾಬ್ದಾರಿ ಸುಮನ್ ಹೆಗಲೇರುತ್ತದೆ.

ಮಹಾರಾಷ್ಟ್ರ ರಾಜ್ಯ ಸರ್ಕಾರದ ‘ಮಾಝೆ ಕುಟುಂಬ್ ಮಾಝಿ ಜವಾಬ್ದಾರಿ’ (ನನ್ನ ಕುಟುಂಬ, ನನ್ನ ಜವಾಬ್ದಾರಿ) ಎಂಬ ಡೋರ್ ಟು ಡೋರ್ ಸ್ಕ್ರೀನಿಂಗ್ ಅಭಿಯಾನವನ್ನು ಆರಂಭಿಸಿತು. ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟು ಆದಷ್ಟು ಹರಡದಂತೆ, ಸಾಂಕ್ರಾಮಿಕವಾಗಿ ಹರಡಬಹುದಾದ ಸ್ಥಳ ಹಾಗೂ ಪರಿಸ್ಥಿತಿಗಳನ್ನು ಗುರುತಿಸುವುದು ಮತ್ತು ಈ ಕುರಿತ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.

ಈ ಅಭಿಯಾನದ ಭಾಗವಾಗಿದ್ದ ಸುಮನ್ ಧೇಬೇ, ಇಂತಹ ಸ್ಥಳಗಳನ್ನು ಗುರುತಿಸುವ ಜವಾಬ್ದಾರಿ ಹೊತ್ತುಕೊಂಡರು. ಇತರ ಗ್ರಾಮಸ್ಥರಿಂದ ತಿಳಿದುಕೊಂಡು, ಎಲೆಮರೆಯ ಕಾಯಿಯಂತಿದ್ದ ಗ್ರಾಮಗಳ ಬಗ್ಗೆ ತಿಳಿದುಕೊಂಡರು. ಮತ್ತು ಆ ಗ್ರಾಮಗಳಿಗೆ ಭೇಟಿ ನೀಡಲು ಎರಡು ಪರ್ವತಗಳನ್ನು ಹತ್ತಿ ಇಳಿಯಬೇಕಿತ್ತು. ಇದ್ಯಾವುದಕ್ಕೂ ಜಗ್ಗದ ಸುಮನ್, ಸುಮಾರು ೧೨-೧೩ ಕಿಮೀ ಚಾರಣ ಮಾಡಿ ಆ ಗ್ರಾಮಗಳಿಗೆ ಭೇಟಿ ಕೊಟ್ಟು, ಕೊರೋನಾ ಕುರಿತ ಜಾಗೃತಿ ಮೂಡಿಸಿದರು.

ಅದು ಕೇವಲ ಜಾಗೃತಿ ಮೂಡಿಸಿದ ಕಾರ್ಯ ಮಾತ್ರವಲ್ಲದೇ, ಗ್ರಾಮಸ್ಥರಲ್ಲಿ ಧೈರ್ಯ ಮತ್ತು ಪರಿಸ್ಥಿತಿಯನ್ನು ಎದುರಿಸುವ ಚಾಕಚಕ್ಯತೆಯನ್ನು ಮೂಡಿಸಿತು. ಪರಿಣಾಮವೆಂಬಂತೆ, ಅಜಮಾಸು ೧,೦೦೦ ಜನಸಂಖ್ಯೆಯಿರುವ ಐದು ಗ್ರಾಮಗಳು ಕೊರೋನಾ ಎರಡನೇ ಅಲೆಗೆ ಸಡ್ಡು ಹೊಡೆದು ನಿಂತವು. ಆ ಐದು ಗ್ರಾಮಗಳು ‘ಕೋವಿಡ್ ಮುಕ್ತ’ ಗ್ರಾಮಗಳಾಗಿ ಗುರುತಿಸಿಕೊಂಡವು.

ದಿನವೂ ಕಿಮೀಗಟ್ಟಲೆ ಚಾರಣ ಮಾಡುವುದು ಹೆಚ್ಚಿನ ದೈಹಿಕ ಶ್ರಮವನ್ನು ಬೇಡುತ್ತದೆ. ಆದರೆ ಈ ನಡಿಗೆಯೇ ಕೊರೋನಾ ಭಯದಿಂದ ನನ್ನನ್ನು ದೂರವಿರಿಸಿದೆ ಎನ್ನುವುದು ಸುಮನ್ ಮಾತು. ದಿನವೂ ೧೦ ಗಂಟೆಗಳ ಕಾಲ ನಡೆಯುವ ಸುಮನ್, ಕೊರೋನಾ ಕಾರಣದಿಂದ ಮೊದಲು ಕೆಲಸಕ್ಕೆ ಹೋಗಲು ಹೆದರುತ್ತಿದ್ದರು. ಚಾರಣ ಮತ್ತು ಮಳೆಯ ಕಾರಣದಿಂದಾಗಿ ಪಿಪಿಇ ಕಿಟ್ ಧರಿಸಲು ಆಗುತ್ತಿರಲಿಲ್ಲ. ಸಾನಿಟೈಜರ್ ಬಿಟ್ಟು, ಬೇರ‍್ಯಾವ ರಕ್ಷಣಾತ್ಮಕ ದಿರಿಸುಗಳನ್ನು ಅವರು ತೊಡುತ್ತಿರಲಿಲ್ಲ.

ಪ್ರತಿದಿನ ಈ ಗಂಭೀರ ಪರಿಸ್ಥಿತಿಯಲ್ಲಿ ಅವರು ಕಾರ್ಯನಿರ್ವಹಿಸಬೇಕಾದುದರಿಂದ ತಮ್ಮ ಕುಟುಂಬಕ್ಕೆ ತಮ್ಮಿಂದ ರೋಗ ಹರಡಬಹುದೆಂಬ ಭಯವೂ ಸುಮನ್ ಅವರಿಗಿತ್ತು. ಆದರೆ ಈ ಎಲ್ಲಾ ಪರಿಸ್ಥಿತಿಗಳ ನಡುವೆಯೂ ಗ್ರಾಮದ ಪ್ರತಿಯೊಂದು ಮನೆಯೂ ಕೋವಿಡ್ ಸ್ಕ್ರೀನಿಂಗಿಗೆ ಒಳಪಟ್ಟಿರುವ ಮತ್ತು ತಿಂಗಳ ಆರೋಗ್ಯ ತಪಾಸಣೆ ಕುರಿತು ಕಾಳಜಿ ವಹಿಸುತ್ತಿದ್ದರು.

ಇವರ ಈ ಸಮರ್ಪಣಾ ಭಾವ ಮತ್ತು ಪ್ರಾಮಾಣಿಕತೆಯನ್ನು ಜಿಲ್ಲಾ ಪರಿಷದ್ ಗುರುತಿಸಿದ್ದು ಮಾತ್ರವಲ್ಲದೆ, ಅವರನ್ನು ಗೌರವಿಸಿತು.  ಆದರೆ ೪೨ ವರ್ಷದ ಈ ಆಶಾ ಕಾರ್ಯಕರ್ತೆ, ‘ಇದು ನನ್ನ ಕೆಲಸದ ಭಾಗವಷ್ಟೇ’ ಎಂದು ಸಮರ್ಪಣಾ ಭಾವದಿಂದ ಹೇಳಿ, ಮತ್ತೆ ತನ್ನ ಕೆಲಸಕ್ಕೆ ಮರಳಿದ್ದಾರೆ.

ಸುಮನ್ ಕಾರ್ಯ ವೈಖರಿ ಹೀಗಿದೆ

ಮಾನಗಾಂವ್ (Mangaon), ಶಿರ್ಕೋಳಿ (Shirkoi), ತನಗಾಂವ್ (Thangaon) ಮತ್ತು ಘೋಡ್ ಶೇಟ್ (Ghodshet) ಇವು ಸುಮನ್ ಧೇಬೇ ಅವರ ವ್ಯಾಪ್ತಿಯಲ್ಲಿದ್ದ ಗ್ರಾಮಗಳು. ಇವುಗಳನ್ನು ಕೊರೋನಾ ಮುಕ್ತ ಗ್ರಾಮಗಳನ್ನಾಗಿ ಮಾಡುವ ಸಕಲ ಹೊಣೆಯೂ ಇವರ ಮೇಲಿತ್ತು. ಹಾಗಾಗಿ ಬೆಳಗ್ಗೆ ೮ ಗಂಟೆಯಿಂದಲೇ ಅವರು ಕೆಲಸಕ್ಕೆ ಹಾಜರಾಗುತ್ತಿದ್ದರು. ಈ ನಾಲ್ಕು ಗ್ರಾಮಗಳನ್ನು ಅವರು ತಲುಪಲು ೧೨-೧೩ ಕಿಮೀ ಚಾರಣ ಮಾಡುತ್ತಿದ್ದರು.

ನೀವುಇದನ್ನುಇಷ್ಟಪಡಬಹುದು: ಕೊರೋನಾ ಸೈನಿಕರಿಗೆ ಗೌರವ ಸಲ್ಲಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4000 ಕಿಮೀ ನಡೆದ ಕನ್ನಡಿಗ ಭರತ್

ಹೆಚ್ಚಿನ ಗ್ರಾಮಗಳಿಗೆ ಸಾರಿಗೆ ಸೌಲಭ್ಯವಿದ್ದರೂ, ಗ್ರಾಮದ ಮೂಲೆಮೂಲೆಗೆ ತಲುಪಿ, ಜಾಗೃತಿ ಕಾರ್ಯವನ್ನು ಮಾಡಬೇಕಾದುದರಿಂದ ಚಾರಣ ಮಾಡುವುದೇ ಉತ್ತಮ ಮಾರ್ಗ. ಈ ಗ್ರಾಮಗಳಲ್ಲಿ ಸಂಪರ್ಕ ಪತ್ತೆ ಮಾಡುವುದು ತುಸು ಕಷ್ಟದ ಕೆಲಸ. ಪರ್ವತಗಳ ನಾಲ್ಕೂ ದಿಕ್ಕುಗಳಲ್ಲಿ ಹರಡಿಹೋದ ಜನಸಂಖ್ಯೆಯನ್ನು ಒಂದುಗೂಡಿಸುವುದು ಒಂದರ್ಥದಲ್ಲಿ ಸವಾಲೇ ಸರಿ!

ಆದರೆ ಸುಮನ್ ಧೇಬೇ, ಗ್ರಾಮದ ಯಾವ ಮೂಲೆಯನ್ನೂ ಬಿಡದೆ, ನಡಿಗೆಯಲ್ಲಿಯೇ ಗ್ರಾಮಗಳನ್ನು, ಗ್ರಾಮಸ್ಥರನ್ನು ತಲುಪಿ ತಮ್ಮ ಕಾರ್ಯಸಾಧನೆಯಲ್ಲಿ ಯಶಸ್ವಿಯಾಗಿದ್ದಾರೆ.

ಅಷ್ಟು ದೂರದ ಚಾರಣವೆಂದರೆ ಭೂಪ್ರದೇಶ ಮತ್ತು ಪರಿಸ್ಥಿತಿಯನ್ನು ಊಹಿಸುವುದು ಅಸಾಧ್ಯ. ಸಂಕೀರ್ಣ ಭೂಪ್ರದೇಶಗಳನ್ನು ಸುಲಭವಾಗಿ ಹತ್ತಿ ಇಳಿಯಲು ಅವರ ಬಳಿಯಿದ್ದಿದ್ದು ಉದ್ದದ ಬಿದಿರುಕೋಲು ಒಂದೇ. ಅದೇ ಅವರ ಪಯಣದ ಸಂಗಾತಿಯಾಗಿತ್ತು.

ಕತ್ತು ಹಾಯಿಸಿದಲ್ಲೆಲ್ಲಾ ಪರ್ವತಗಳೇ ತುಂಬಿರುವ ಆ ಪ್ರದೇಶದಲ್ಲಿ, ಬೀಸುವ ತಂಗಾಳಿ, ಅವರ ಜವಾಬ್ದಾರಿಯನ್ನು, ಹೊಣೆಗಾರಿಕೆಯನ್ನು ನೆನಪಿಸುತ್ತಿತ್ತು. ಅದೇ ಸಮರ್ಪಣಾ ಭಾವದಲ್ಲಿ, ತಮ್ಮ ಕೆಲಸವನ್ನು ಬಹುವಾಗಿ ಇಷ್ಟಪಟ್ಟು ದಿನವೂ ನಡೆಯುತ್ತಿದ್ದರು ಸುಮನ್. 

ಆಶಾ ಕಾರ್ಯಕರ್ತೆಯರ ಸಮರ್ಪಣಾ ಮನೋಭಾವ!

ಪುಣೆ ಜಿಲ್ಲಾ ಪರಿಷದ್ ವ್ಯಾಪ್ತಿಯಲ್ಲಿ ೨೦೧೨ರಿಂದಲೂ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿಯೂ ವೆಲ್ಹೆ ತಾಲೂಕಿನ ೪೮ ಕಾರ್ಯಕರ್ತೆಯರು ಗರ್ಭಿಣಿ, ಬಾಣಂತಿ ಹೆಂಗಸರ ಮತ್ತು ಹಸುಗೂಸುಗಳ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಆರೋಗ್ಯದ ಕಾಳಜಿ ಮಾತ್ರವಲ್ಲದೆ, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಅವರಿಗೆ ಒದಗಿಸುವಲ್ಲಿ ನೆರವಾಗುತ್ತಿದ್ದಾರೆ.

ಪುಣೆ ಜಿಲ್ಲಾ ಪರಿಷದ್ ವ್ಯಾಪ್ತಿಯಲ್ಲಿ ೧,೦೦೦ ಜನಸಂಖ್ಯೆಗೆ ಒಬ್ಬ ಆಶಾ ಕಾರ್ಯಕರ್ತೆಯನ್ನು ನೇಮಿಸಲಾಗಿದೆ. ಇದನ್ನು ಭೌಗೋಳಿಕ ಪ್ರದೇಶದ ಆಧಾರದಲ್ಲಿ ವಿಂಗಡಿಸದೆ, ಜನಸಂಖ್ಯಾ ಆಧಾರದಲ್ಲಿ ವಿಂಗಡಿಸಲಾಗಿದೆ. ಸುಮನ್ ಅವರ ವ್ಯಾಪ್ತಿಗೆ ಬರುವ ಗ್ರಾಮಗಳು ರಾಜಗಢ ಮತ್ತು ತೋರ್ನಾ ಕೋಟೆಗೆ ಪ್ರಸಿದ್ಧವಾದ ಪಶ್ಚಿಮ ಘಟ್ಟಗಳ ಸಾಲಿನಲ್ಲಿದೆ.

ಹೆಚ್ಚಿನ ಗ್ರಾಮೀಣ ಭಾಗದ ನಿವಾಸಿಗಳು ಸಕ್ಕರೆ ಖಾಯಿಲೆ, ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಆಶಾ ಕಾರ್ಯಕರ್ತೆಯರು ಆಗಾಗ ಮನೆಗೆ ಭೇಟಿ ನೀಡುವುದು, ತಿಂಗಳ ಆರೋಗ್ಯ ತಪಾಸಣೆ ನಡೆಸುವುದು ಅನಿವಾರ್ಯವಾಗುತ್ತದೆ.

ಸುಮನ್ ಅವರ ಈ ಸಮರ್ಪಣಾ ಮನೋಭಾವ, ಪ್ರಾಮಾಣಿಕತೆ ಮತ್ತು ಛಲಕ್ಕೆ ಸ್ಫೂರ್ತಿ ಏನೆಂದು ಕೇಳಿದರೆ, ಅವರು ಹೇಳುವುದು ಹೀಗೆ; ‘ನನಗೆ ವಹಿಸಿದ ಗ್ರಾಮಗಳ ಜವಾಬ್ದಾರಿ ಎಂದಿಗೂ ನನ್ನದೇ. ನಾನೊಬ್ಬಳೇ ಅವರನ್ನು ತಲುಪುವ ಮಾಧ್ಯಮವಾದುದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು ತಪ್ಪಾಗುತ್ತದೆ. ಅದಲ್ಲದೇ, ಸರಿಯಾದ ವೈದ್ಯಕೀಯ ಸೌಲಭ್ಯಗಳು ಇಲ್ಲದೇ ಇರುವುದರಿಂದ, ಸರಿಯಾದ ಸಮಯಕ್ಕೆ ಅವರ ಜೊತೆಯಾಗಿ ನಿಲ್ಲುವುದು ಉತ್ತಮ ಔಷಧಿ’ ಎನ್ನುತ್ತಾರೆ ಹೆಮ್ಮೆಯಿಂದ.

ಇವರ ಕಾರ್ಯಗಳ ಫಲವೆಂಬಂತೆ, ಐದು ಗ್ರಾಮಗಳು ಕೊರೋನಾ ಮುಕ್ತವಾದಾಗ ಅವರ ಸಂತೋಷ ಮುಗಿಲು ಮುಟ್ಟಿತ್ತು. ಕೊರೋನಾ ಕುರಿತ ಜಾಗೃತಿ ಮೂಡಿಸುವುದು, ಮಾಸ್ಕ್ ಧರಿಸುವ ಮತ್ತು ಕೈಗಳನ್ನು ಆಗಾಗ ಸ್ವಚ್ಛಗೊಳಿಸುವ ಮಹತ್ವವನ್ನು ವಿವರಿಸಿದ ಪರಿಣಾಮ, ಇಂದು ಆ ಗ್ರಾಮಗಳು ಕೊರೋನಾ ವಿರುದ್ಧ ಜಯಶಾಲಿಯಾಗಿವೆ.

ಎರಡನೇ ಅಲೆಯ ತೀವ್ರತೆ ಜಾಸ್ತಿಯಾದಾಗ ಯಾರೂ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಇದರಿಂದಾಗಿ ಕೊರೋನಾ ಇಡೀ ಗ್ರಾಮಕ್ಕೆ ಹರಡುವ ಭಯವಿತ್ತು. ಆದರೆ ಆ ಗ್ರಾಮಗಳು ಇಂದು ಕೊರೋನಾ ಮುಕ್ತವಾಗಲು ಸುಮನ್ ಪರಿಶ್ರಮವೇ ಕಾರಣವೆಂದು ಜಿಲ್ಲಾ ಪರಿಷದ್ ಅವರ ಕಾರ್ಯವನ್ನು ಶ್ಲಾಘಿಸಿದೆ.

ಸುಮನ್ ಅವರ ಕೆಲಸವನ್ನು ಸುಲಭಗೊಳಿಸಲು ಜಿಲ್ಲಾ ಪರಿಷದ್ ಅವರಿಗೆ ವಾಹನ ಸೌಲಭ್ಯವನ್ನು ಒದಗಿಸಲು ಮುಂದಾಗಿತ್ತು. ಆದರೆ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ ಸುಮನ್, ‘ನಾನು ನನ್ನ ಕರ್ತವ್ಯವನ್ನು ಪಾಲಿಸುತ್ತಿದ್ದೇನೆ ಅಷ್ಟೇ. ಅದ್ಯಾವ ತೊಂದರೆಗಳು ಎದುರಾದರೂ, ಹೊರಿಸಿರುವ ಜವಾಬ್ದಾರಿಯನ್ನು ಪೂರೈಸಲು ನಾನು ಸದಾ ತಯಾರಿದ್ದೇನೆ. ನನಗೆ ಈ ಕೆಲಸದ ಬಗ್ಗೆ ಯಾವುದೇ ದೂರುಗಳಿಲ್ಲ. ಆದರೆ ಶ್ರದ್ಧೆ ಇದೆ. ನನ್ನ ವಯಸ್ಸು ಮತ್ತು ಆರೋಗ್ಯ ಕೈಕೊಡುವವರೆಗೆ ನಾನು ಇದೇ ಕರ್ತವ್ಯದಲ್ಲಿ ಮುಂದುವರೆಯುತ್ತೇನೆ’ ಎನ್ನುತ್ತಾರೆ ಮುಗುಳ್ನಗುತ್ತಾ.

ಆಶಾ ಕಾರ್ಯಕರ್ತೆಯರ ಸಂಬಳ, ಸವಲತ್ತುಗಳು ಕಡಿಮೆಯಿದ್ದರೂ, ಸಾಮಾಜಿಕ ಕಳಕಳಿ ಮತ್ತು ಕೆಲಸದ ಮೇಲಿನ ಪ್ರೀತಿಯಿಂದ ಅವರು ದುಡಿಯುತ್ತಾರೆ ಎನ್ನುವುದಕ್ಕೆ ಸುಮನ್ ಉತ್ತಮ ಉದಾಹರಣೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button