ತುಂಬಿದ ಮನೆಸೂಪರ್ ಗ್ಯಾಂಗು

ಮಕ್ಕಳಿಗೆ ಪ್ರಾಣಿ ಪ್ರೀತಿ ಹೆಚ್ಚಿಸುವ ಪ್ರಾಣಿ ಲೋಕ: ವೀಕೆಂಡ್ ಭೇಟಿಗೆ ಪ್ರಿಯಾ ಕೆರ್ವಾಶೆ ಸೂಚಿಸಿದ ಜಾಗ

ಟ್ರೆಕ್ಕಿಂಗ್ ವ್ಯಾಮೋಹಿ, ರಂಗ ನಟಿ, ಪತ್ರಕರ್ತೆ, ವಾಯ್ಸ್ ಓವರ್ ಆರ್ಟಿಸ್ಟು ಎಲ್ಲವೂ ಆಗಿರುವ ಪ್ರಿಯಾ ಕೆರ್ವಾಶೆ ಬಹುಮುಖ ಪ್ರತಿಭೆ. ಚಂದದ ಕತೆಗಳನ್ನೂ ಬರೆಯಬಲ್ಲ, ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಇವರು ಪ್ರಸ್ತುತ ಕನ್ನಡಪ್ರಭ ಪತ್ರಿಕೆಯ ಪತ್ರಕರ್ತೆ.

‘ಅಲ್ಲಿ ಮೂಲೇಲಿ ನೋಡಿ, ಏನದು?’

ಆತ ಕೖ ತೋರಿಸಿದತ್ತ ನೋಡಿದರೆ ಹಸಿರು ಬಣ್ಣದ ಗೋಲಾಕಾರದ ಬಾಲ್ ನಂಥಾ ರಚನೆಗಳು ಹುಲ್ಲಿನ ಮೇಲೆ ಬಿದ್ದಿದ್ದವು. ಒಂಚೂರು ಹತ್ರ ಹೋಗಿ ನೋಡೋಣ ಅಂತ ಎರಡು ಹೆಜ್ಜೆ ಇಟ್ಟಾಗ ಆ ದೖತ್ಯ ಹಕ್ಕಿ ಕುಕ್ಕುವಂತೆ ಓಡೋಡಿ ಬಂತು. ’ಗಾಬರಿ ಆಗ್ಬೇಡಿ, ಅವೇನೂ ಮಾಡಲ್ಲ. ಆದ್ರೆ ನೀವು ಓಡಬಾರದು, ಜೋರಾಗಿ ಶಬ್ದ ಮಾಡಬಾರದು..’ ಅಂದ.

ಸರಿ ಅಂತ ಎತ್ತಿದ ಹೆಜ್ಜೆಯನ್ನು ಹಿಂದಿಟ್ಟು ಗಮನಿಸತೊಡಗಿದೆವು. ಆ ಹಕ್ಕಿ ನಮ್ಮನ್ನು ದಾಟಿ ಹುಲ್ಲಿನತ್ತ ನಡೆಯಿತು.

‘ಅದು ಎಮುವಿನ ಮೊಟ್ಟೆ. ತಾಯಿ ಹಕ್ಕಿ ಮೊಟ್ಟೆ ಇಟ್ಟು ತನ್ನ ಪಾಡಿಗೆ ಎಲ್ಲೋ ಹೋಗ್ಬಿಡುತ್ತೆ. ಕಾವು ಕೊಡಲ್ಲ, ನೋಡ್ಕೊಳಲ್ಲ, ಮತ್ತೆ ಹೇಗೆ ಆ ಮೊಟ್ಟೆ ಮರಿಯಾಗುತ್ತೆ?’

ಅರೆ, ಪ್ರಕೃತಿಯಲ್ಲಿ ಹೀಗೂ ಇರುತ್ತಾ!

‘ಹಾವುಗಳ ಹಾಗೆ ತನ್ನಿಂತಾನೇ ಮೊಟ್ಟೆ ಒಡೆದು ಮರಿ ಹೊರಗೆ ಬರಬಹುದಾ?’ ಅಂತ ಕೇಳಿದ್ರೆ ಆತ ನಕ್ಕು ತಲೆ ಅಡ್ಡಡ್ಡ ತಿರುಗಿಸಿದ.

‘ಗಂಡು ಹಕ್ಕಿ ಮೊಟ್ಟೆ ಮೇಲೆ ಕೂರುತ್ತೆ. ಭರ್ತಿ ಎಂಟುವಾರ! ಅಲ್ಲೀವರೆಗೆ ಆಹಾರ ನೀರು ಏನೂ ಇರಲ್ಲ. ಕೊನೆಗೆ ಮರಿ ಆದ ಮೇಲೆನೇ ಆಚೆ ಬರೋದು. ತೂಕ ವಿಪರೀತ ಇಳಿದಿರುತ್ತೆ. ಆದ್ರೆ ಅದಕ್ಕಾಗ ಎಷ್ಟು ಸಿಟ್ಟಿರುತ್ತೆ ಅಂದ್ರೆ ನಮ್ಮ ಎದೆಗೇನಾದ್ರೂ ಒದ್ರೆ ಎದೆ ಮೂಳೆ ಮುರಿಯೋದು ಗ್ಯಾರೆಂಟಿ. ಈ ಫೆನ್ಸ್ ಆಚೆ ಗೇಟ್ ಇದ್ಯಲ್ಲಾ, ಕಳೆದ ವರ್ಷ ಒಂದು ಎಮು ಆ ಗೇಟನ್ನೇ ಮುರಿದು ಹಾಕಿತ್ತು!’

… ಬೆಂಗಳೂರಿನಿಂದ ಕೇವಲ ೨೦ ಕಿಮೀ ದೂರದಲ್ಲಿದೆ ‘ಪ್ರಾಣಿ’. ನಮಗೆ ಇಂಥಾದ್ದೊಂದು ಅನುಭವ ಆಗಿದ್ದು ಅಲ್ಲೇ.

ಪ್ರಾಣಿ ಅನ್ನೋ ಪ್ರೇಮಾಲಯ

ಪ್ರಾಣಿ ಪ್ರಿಯ ಸಂಜೀವ್ ಪೆಡ್ನೇಕರ್ ಈ ’ಪ್ರಾಣಿ’ ಸಂಸ್ಥೆಯ ಸಂಸ್ಥಾಪಕ. 28 ವರ್ಷದ ಈ ತರುಣ ಕನಕಪುರ ರಸ್ತೆಯ ಸೋಮನಹಳ್ಳಿ ಬಳಿ ಇಂಥಾ ವಿಶಿಷ್ಟ ಪ್ರಾಣಿ ಸಂಗ್ರಹಾಲಯ ನಿರ್ಮಿಸಿದ್ದಾರೆ. ಇಲ್ಲಿರೋದೆಲ್ಲ ಮನೆಯಲ್ಲಿ ಸಾಕಲು ಅನುಮತಿ ಇರುವ ಪ್ರಾಣಿ ಪಕ್ಷಿಗಳು. ಆದರೆ ಇವ್ಯಾವವನ್ನೂ ದುಡ್ಡುಕೊಟ್ಟು ಖರೀದಿಸಿ ತಂದಿಟ್ಟುಕೊಂಡಿದ್ದಲ್ಲ. ಬದಲಿಗೆ ಸಾವಿನಂಚಿನಲ್ಲಿದ್ದ ಪ್ರಾಣಿಗಳನ್ನು ರಕ್ಷಿಸಿ ಕರೆತಂದಿದ್ದು. ಇಲ್ಲಿರುವ ಒಂದೊಂದು ಪ್ರಾಣಿಯ ಹಿಂದೆಯೂ ಒಂದೊಂದು ಕರುಣ ಕಥೆ ಇದೆ. ಇಲ್ಲಿನ ಗೖಡ್ ಗಳು ಈ ವಿವರದ ಜೊತೆಗೆ ಪ್ರತೀ ಪ್ರಾಣಿಯ ವಿಶಿಷ್ಟತೆಯನ್ನು ಆಸಕ್ತಿ ಕೆರಳಿಸುವಂತೆ ವಿವರಿಸುತ್ತಾರೆ. ಪ್ರಾಣಿಗಳ ಜೊತೆಗೇ ಕೇಳಿದ ಈ ವಿವರಗಳು ಅಷ್ಟು ಬೇಗ ತಲೆಯಿಂದಾಚೆ ಹೋಗುವುದಿಲ್ಲ.

ಒಂದು ವೀಕೆಂಡ್‌ನಲ್ಲಿ ಬೆಂಗಳೂರಿನ ದಟ್ಟಣೆಯಿಂದ ಆಚೆ ಬರಬೇಕು ಅನಿಸಿದರೆ, ಪ್ರಾಣಿಗಳ ಜೊತೆಗೆ ಪೀಸ್‌ಫುಲ್ ಆಗಿ ಟೖಮ್ ಸ್ಪೆಂಡ್ ಮಾಡಬೇಕು ಅನಿಸಿದರೆ ಇಲ್ಲಿಗೆ ಭೇಟಿ ನೀಡಬಹುದು. ಕನಕಪುರ ರಸ್ತೆಯಲ್ಲಿ ಮುಂದೆ ಬಂದರೆ ಸೋಮನಹಳ್ಳಿ ಅನ್ನೋ ಚಂದದ ಹಳ್ಳಿ ಸಿಗುತ್ತೆ. ಸಣ್ಣ ಸೇತುವೆ, ಚೆಂದದ ಹಳ್ಳ, ವಿಸ್ತಾರ ಬಯಲು, ಗದ್ದೆಗಳನ್ನು ಹಾದು ತುಸು ಮುಂದೆ ಹೋದರೆ ‘ಪ್ರಾಣಿ’ ಬೋರ್ಡ್‌ ಕಾಣುತ್ತೆ.

ಮುಟ್ಟಬಹುದು, ಮುದ್ದಾಡಬಹುದು!

ಸರ್ಕಾರಿ ಶಾಲೆಯ ಮಕ್ಕಳಿಗೆ ಇದರೊಳಗೆ ಫ್ರೀ ಎಂಟ್ರಿ. ಉಳಿದವರು 400 ರು. ಕೊಟ್ಟು ಹೋಗಬೇಕು. ನಾವು ಕೊಡುವ ಈ ಹಣ ಪ್ರಾಣಿಗಳಿಗೆ ಆಹಾರ, ಅವುಗಳನ್ನು ನೋಡಿಕೊಳ್ಳುವವರ ಸಂಬಳ ಇತ್ಯಾದಿಗೆ ವಿನಿಯೋಗವಾಗುತ್ತದೆ. ಎರಡು ಗಂಟೆಗಳ ಈ ಟೂರ್ ನ ಮೊದಲ ಭಾಗದಲ್ಲಿ ನಿಮಗೆ ಸಿಗುವುದು ಇಲಿಯ ಜಾತಿಯ Rodentsಗಳು. ಮುದ್ದಾದ ಹ್ಯಾಮ್ ಸ್ಟರ್, ಗಿನಿಪಿಗ್‌ಗಳು, ಮೖತುಂಬ ಮುಳ್ಳುಗಳಿರುವ ಮುಟ್ಟಿದ ಕೂಡಲೇ ಮುಳ್ಳಿನ ಚೆಂಡಿನ ಹಾಗಾಗುವ ಇಲಿಯಷ್ಟೇ ಕಿರಿದಾದ Hedgehogಗಳು, ಆಫ್ರಿಕಾ, ಆಸ್ಟ್ರೇಲಿಯಾ ಮೊದಲಾದೆಡೆಗಳ ಕೆಲವಾರು ರೋಡೆಂಟ್ಸ್ ಇಲ್ಲಿವೆ. 

‘ನೋಡಿ, ಈ ಮರದ ಪೀಸ್‌ ಒಂದು ಮೂರು ಫೀಟ್ ಉದ್ದ ಇತ್ತು. ಈಗ ಇಷ್ಟೇ ಇದೆ. ಇದನ್ನು ಇಲಿ ತಿನ್ನಲ್ಲ ಕಚ್ಚುತ್ತೆ, ಯಾಕೆ?’ ಮಕ್ಕಳ ಬಳಿ ಹೀಗೆ ಪ್ರಶ್ನೆ ಕೇಳ್ತಾರೆ ಗೖಡ್. ಆಮೇಲೆ ರೋಡೆಂಟ್ಸ್ ಗಳ ಬೆಳೆಯುತ್ತಲೇ ಹೋಗೋ ಹಲ್ಲುಗಳು, ಅವುಗಳನ್ನು ನಿಯಂತ್ರಿಸಲು ಈ ಜಾತಿಯ ಪುಟ್ಟ ಪ್ರಾಣಿಗಳು ಸದಾ ಮರವನ್ನು ಕಡಿಯುತ್ತಾ ಇರೋ ವಿಸ್ಮಯಕರ ಸಂಗತಿಗಳನ್ನು ವಿವರಿಸುತ್ತಾರೆ. ಆಮೇಲೆ ಮಂಜಿನಷ್ಟು ಬಿಳುಪಿನ ಮೖ ತುಂಬ ಮೃದುವಾದ ರೋಮವಿರುವ ಹ್ಯಾಮ್ ಸ್ಟರ್ ತಂದು ತೆರೆದ ಅಂಗೖ ಮೇಲಿಡುತ್ತಾರೆ. ಮೃದುವಾಗಿ ಅದನ್ನು ನೇವರಿಸುತ್ತಿರುವಾಗಲೇ, ಈ ಪುಟ್ಟ ದೇಹದ ಪ್ರಾಣಿಗಳು ಆಹಾರಕ್ಕಾಗಿ ಕಾಡಿನಲ್ಲಿ ದಿನಕ್ಕೆ ನಾಲ್ಕೖದು ಕಿಮೀ ನಡೆಯೋದು, ಅವುಗಳ ಬೇಟೆ ಇತ್ಯಾದಿ ಕುತೂಹಲಕರ ಸಂಗತಿ ವಿವರಿಸುತ್ತಾರೆ.

ಇಗ್ವಾನ ಸ್ಪರ್ಶ

ಬಹುಶಃ ಇಗ್ವಾನಾಗಳನ್ನು ಕೖಯಲ್ಲಿ ಹಿಡಿಯೋದು, ಮುಟ್ಟೋದು, ಬಲು ಹತ್ತಿರದಿಂದ ನೋಡೋದು ಇಲ್ಲಷ್ಟೇ ಸಾಧ್ಯ ಅನಿಸುತ್ತೆ. ಹಲ್ಲಿ ಜಾತಿಗೆ ಸೇರಿದ ಈ ಜೀವಿಗಳು ಸನ್ನಿವೇಶಕ್ಕೆ ತಕ್ಕಂತೆ ತಮ್ಮ ಬಣ್ಣ ಬದಲಾಯಿಸಿಕೊಳ್ಳುತ್ತವೆ. ‘ಬೇರೆಲ್ಲಿ ಬೇಕಿದ್ರೂ ಮುಟ್ಟಿ. ಬಾಲ ಟಚ್ ಮಾಡ್ಬೇಡಿ’ ಅಂತಾರೆ ಗೖಡ್. ಇವು ಬಾಲದಿಂದ ಬೀಸಿ ಹೊಡೆದರೆ ಮೖಮೂಳೆ ಮುರಿಯೋದು ಗ್ಯಾರೆಂಟಿ. ನಾಲ್ಕೖದು ಇಗ್ವಾನಗಳು ಮರದ ರೆಂಬೆಯ ಮೇಲೆ ಧ್ಯಾನಸ್ಥ ಮುನಿಯಂತೆ ಶೂನ್ಯವನ್ನು ದಿಟ್ಟಿಸುತ್ತಾ ಕೂತಿರುತ್ತವೆ. ಕೖಯಲ್ಲಿಟ್ಟ ಕೂಡಲೇ ಕೖಯನ್ನೂ ಮರವೆಂದು ಭಾವಿಸಿ ಆಧರಿಸುವ ಪ್ರಯತ್ನ ಮಾಡುತ್ತವೆ.

ಮಾಯಾ, ಕಮ್ ಅಂದ್ರೆ ಹಾಜರ್

ಅಷ್ಟೆತ್ತರ ರೇಸ್ ಕುದುರೆ ಅದು. ಮಕ್ಕಳಂಥಾ ಸ್ವಭಾವ. ‘ಮಾಯಾ, ಕಮ್’ ಅಂತ ಕರೆದರೆ ರಾಜ ಗಾಂಭೀರ್ಯದಲ್ಲಿ ಬಂದು ಹುಲ್ಲು ತಿಂದು ಇಷ್ಟವಾದರೆ ಏನೋ ಮಾತನಾಡುವಂತೆ ಮಾಡುತ್ತ ನಿಲ್ಲುತ್ತದೆ. ಇಲ್ಲವಾದರೆ ಒಳ ನಡೆಯುತ್ತದೆ. ಇದು ರೇಸ್‌ ಕುದುರೆಯ ಜಾತಿಗೆ ಸೇರಿದ್ದು. ಮಾಯಾ ಮರಿಯಾಗಿದ್ದಾಗ ರೇಸ್ ಕೋರ್ಸ್ ನಲ್ಲೇ ಇತ್ತು. ಒಂದು ಕಾಲಿನ ಗೊರಸು ಕೊಂಚ ಚಿಕ್ಕದಿದ್ದ ಕಾರಣಕ್ಕೆ ರೇಸ್ ಗೆ ಓಡೋ ಸೌಭಾಗ್ಯವಂಚಿತೆಯಾಯ್ತು. ಇಂಥಾ ಜಾತಿಯ ಕುದುರೆಗಳಿಗೆ ವಿಪರೀತ ಖರ್ಚು ಇರುವ ಕಾರಣ ಇವತ್ತು ಒಂದೋ ಸಾಕುವವರಿಗೆ ಕೊಡುತ್ತಾರೆ, ಇಲ್ಲವೇ ಮರಿಯಾಗಿದ್ದಾಗಲೇ ಸಾಯಿಸುತ್ತಾರೆ. ಮಾಯಾ ಇಲ್ಲಿ ಬಂದು ಜೀವ ಉಳಿಸಿಕೊಂಡು ರಾಜಕುಮಾರಿಯಂತೆ ಓಡಾಡಿಕೊಂಡಿದೆ.

ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

ಬೀದಿಪಾಲಾಗಿದ್ದ ಎಮುಗಳು

ಆಸ್ಟ್ರೇಲಿಯಾದ ಈ ಹಕ್ಕಿಗಳನ್ನು ದಶಕಗಳ ಹಿಂದೆ ಭಾರತಕ್ಕೆ ತರಲಾಯ್ತು. ಆರಂಭದಲ್ಲಿ ಇವುಗಳ ಮಾಂಸ, ಮೊಟ್ಟೆಯಿಂದ ಲಾಭ ಬರಬಹುದು ಅಂತ ಕೆಲವರು ಸಾಕಾಣಿಕ ಆರಂಭಿಸಿದರೂ ಆಮೇಲೆ ಕಷ್ಟವಾಗಿ ಬೀದಿಗೆ ಬಿಟ್ಟರು. ಆಗ ಇವುಗಳ ಸ್ಥಿತಿ ಶೋಚನೀಯವಾಗಿತ್ತು.

ಕೆಲವು ಹೊಟೇಲ್ ನವರು ಗ್ರಾಹಕರನ್ನು ಆಕರ್ಷಿಸಲು ಇವುಗಳನ್ನು ಹೊಟೇಲ್ ಮುಂದೆ ಸಾಕಲಾರಂಭಿಸಿದರು. ಆದರೆ ಕೆಟ್ಟ ಆಹಾರದಿಂದ ಇವು ರೋಗಗ್ರಸ್ಥವಾಗಿ ಸಾಯಲು ಬಿದ್ದವು. ಇಂಥಾ ಎಮುಗಳನ್ನು ರಕ್ಷಿಸಿ ಇಲ್ಲಿಗೆ ತಂದುಬಿಟ್ಟಿದ್ದಾರೆ. ಆಕ್ರಮಣಕಾರಿ ಹಕ್ಕಿಗಳಾದ ಇವು ಇಲ್ಲಿ ಪ್ರವಾಸಿಗರ ಜೊತೆಗೆ ಸ್ನೇಹಿತರ ಹಾಗಿರುತ್ತವೆ. ಒಂದು ಗಂಡು ಹಕ್ಕಿಯಂತೂ ಮಕ್ಕಳಿಂದ ಮುದ್ದಾಡಿಸಿಕೊಂಡು ಎಲ್ಲರ ಫೇವರೆಟ್ ಆಗಿತ್ತು. ಆದರೆ ಅದು ವರ್ಷಗಳ ಕೆಳಗೆ ವಯಸ್ಸಾಗಿ ಮೃತ ಪಟ್ಟಿತು. ಎಮುಗಳನ್ನು, ಅವುಗಳ ಭಿನ್ನ ಜೀವನಕ್ರಮವನ್ನು ಇಲ್ಲಿನ ಗೈಡ್ ಗಳು ವಿವರಿಸುವ ರೀತಿ ಆಸಕ್ತಿದಾಯಕ. ಮಕ್ಕಳಿಗಂತೂ ಬಹಳ ಉಪಯುಕ್ತ.

ಪಕ್ಷಿಧಾಮ

ಹಕ್ಕಿಗಳ ಮನೆಯೊಳಗೆ ಹೊಕ್ಕರೆ ನಾಲ್ಕೖದು ಹಕ್ಕಿಗಳು ಹಾರಿ ಬಂದು ಹೆಗಲು, ತಲೆಯೇರುತ್ತವೆ. ಕೈಯಲ್ಲಿ ಕಾಳಿದ್ದರೆ ಅಂಗೖ ಮೇಲೇ ಕೂತು ತಿನ್ನುತ್ತವೆ. ದೂರದಲ್ಲೆಲ್ಲೋ ಕಂಡು ಮರೆಯಾಗುವ ಈ ಹಕ್ಕಿಗಳನ್ನು ಇಲ್ಲಿ ಮೖಮೇಲೇ ಹತ್ತಿಸಿಕೊಂಡು ಮಾತನಾಡಿಸೋದು ಸಖತ್ ಥ್ರಿಲ್ಲಿಂಗ್. ನೂರಾರು ಬಗೆಯ ಹಲವು ಜಾತಿಯ ಹಕ್ಕಿಗಳು ಇಲ್ಲಿವೆ. ಸಖತ್ ಮನುಷ್ಯ ಸ್ನೇಹಿಯಾಗಿವೆ. ಕೖಯಲ್ಲಿ ಕೂರಿಸಿ ಮಾತನಾಡಿಸುತ್ತಿದ್ದರೆ ಅವೂ ಅವುಗಳ ಭಾಷೆಯಲ್ಲಿ ಕಿಚಪಿಚ ಮಾತಾಡುತ್ತವೆ.

ಇದರ ಜೊತೆಗೆ ಆಮೆಗಳು, ಬಾತುಗಳು, ನಾಯಿಗಳಿವೆ. ನುರಿತ ಬಿಲ್ಲುಗಾರನ ಹಾಗೆ ನೀರು ಚಿಮ್ಮಿಸಿ ಬೇಟೆಯಾಡುವ ಮೀನುಗಳಿವೆ. ಕತ್ತೆಗಳನ್ನು ಮಾತನಾಡಿಸಬಹುದು, ಚೆಂದದ ಮೊಲಗಳನ್ನು ಮೖದಡವಬಹುದು. ಮುದ್ದಾದ ಆಡಿನ ಮರಿಗಳ ಜೊತೆಗೆ ಆಟವಾಡಬಹುದು.

ನಿಮ್ಮ ಟೂರ್ ಮುಗಿದ ಮೇಲೂ ಈ ಸಂಗ್ರಹಾಲಯ ಕ್ಲೋಸ್ ಆಗೋ ತನಕ ಪ್ರಾಣಿಗಳ ಜೊತೆಗೆ ಇರಬಹುದು. ಆದರೆ ತಿಂಡಿ ಒಳ ತರುವ ಹಾಗಿಲ್ಲ. ಸಂಪೂರ್ಣ ಸುರಕ್ಷತಾ ಕ್ರಮಗಳಿವೆ. ಹೀಗಾಗಿ ಕೋವಿಡ್ ಗೆ ಹೆದರಬೇಕಿಲ್ಲ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button