ಆಸ್ಟ್ರೇಲಿಯಾದಲ್ಲಿದ್ದು ಕರ್ನಾಟಕದ ಕಾಡು ಉಳಿಸಲು ಶ್ರಮಿಸುತ್ತಿರುವ ವೈಲ್ಡ್ ಲೈಫ್ ಫೋಟೋಗ್ರಾಫರ್: ವಿಜಯ್ ಎಂಬ ಹುಮ್ಮಸ್ಸಿನ ಸಾಧಕನಿಗೆ ನಮಸ್ಕಾರ
- ಗಿರೀಶ್ ಮಾದೇನಹಳ್ಳಿ
ಇವರಿಗೆ ಬಾಲ್ಯದಲ್ಲಿ ಕ್ಯಾಮೆರಾದೆಡೆಗೆ ಹುಟ್ಟಿದ ಕುತೂಹಲ ವನ ಸಂಪತ್ತಿನ ಉಳಿವಿಗೆ ದುಡಿಯಲು ಪ್ರೇರಣೆಯಾಯಿತು. ವೀಕೆಂಡ್ ಬಂದರೆ ಮೋಜು-ಮಸ್ತಿಗೆ ಸರಿಗೆಯವರು ಹೊರಟರೆ ಇವರು ಮಾತ್ರ ತಮ್ಮ ಪುಟ್ಟ ಮಗು, ಪ್ರೀತಿಯ ಮಡದಿ ಜೊತೆ ಅಪರೂಪದ ಹಕ್ಕಿಗಳ ಅರಸುತ್ತಾ ಕಾಡು-ಮೇಡಿನ ಹಾದಿ ತುಳಿಯುತ್ತಾರೆ. ದೇಶ-ವಿದೇಶದ ಕಾನನದಲ್ಲಿ ಅಡ್ಡಾಡುತ್ತಲೇ ತಾಯ್ನಾಡಿನ ಅರಣ್ಯ, ಅರಣ್ಯ ರಕ್ಷಕರು ಹಾಗೂ ಕಾಡು ಜನರ ಶ್ರೇಯೋಭಿವೃದ್ಧಿಗೆ ಅಳಿಲು ಸೇವೆಗೈಯುತ್ತಿದ್ದಾರೆ. ಇವರ ಹೆಸರು ವಿಜಯ್. ಮೂಲ ಬೆಂಗಳೂರು. ಸದ್ಯ ವಾಸ ಆಸ್ಟ್ರೇಲಿಯಾದ ಪರ್ತ್ ನಲ್ಲಿ.
ದಶಕದ ಹಿಂದೆ ಉದ್ಯೋಗ ಅರಸಿ ಆಸ್ಟ್ರೇಲಿಯಾ ಸೇರಿದ ಬೆಂಗಳೂರಿನ ವಿಜಯ್ ಅವರು, ಪ್ರಸುತ್ತ ಪರ್ತ್ ನಗರದಲ್ಲಿ ಪತ್ನಿ ತುಮಕೂರು ಮೂಲದ ವಿದ್ಯಾ ಹಾಗೂ ಪುಟಾಣಿ ಮಗಳು ವಿಧಿ ಜತೆ ನೆಲೆಸಿದ್ದಾರೆ. ವಿದೇಶದ ಭೂಮಿಯಲ್ಲಿ ತಮ್ಮ ಭಾವ ಜಗತ್ತನ್ನು ಅವರು ಸುಂದರವಾಗಿಸಿಕೊಂಡಿದ್ದಾರೆ. ವಾರಾಂತ್ಯದಲ್ಲಿ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಹೊರಟರೆ ವಿಜಯ್, ಹಕ್ಕಿಗಳ ಹುಡುಕುತ್ತಾ ದಣಿವಿಲ್ಲದೆ ಹತ್ತಾರು ಕಿ.ಮೀ ಸಾಗುತ್ತಾರೆ.
ದಿನವಿಡೀ ತಾಸುಗಟ್ಟಲೇ ಧ್ಯಾನ್ಯಸ್ತರಾಗಿ ಕ್ಯಾಮೆರಾದಲ್ಲಿ ಆ ಹಕ್ಕಿಗಳನ್ನು ಸೆರೆ ಹಿಡಿಯುತ್ತಾರೆ. ಅವರಿಗೆ ಭೂತಾಯಿಯೇ ಸ್ಫೂರ್ತಿ, ಆಕೆಯೇ ಸುಂದರ ಚೆಲುವು. ಅಪರೂಪದ ಹಕ್ಕಿಗಳ ಪೋಟೋ ಬಿಕರಿ ಮಾಡಿ ಜೇಬು ತುಂಬಿಸಿಕೊಳ್ಳುವ ಮನಸ್ಸಿಲ್ಲ. ಕೆರೆಯನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಪ್ರಕೃತಿ ನೀಡಿದ ಖುಷಿಯನ್ನು ಅದರ ಪೋಷಣೆಗೆ ಹಿಂತಿರುಗಿಸುವ ಧ್ಯೇಯ ಅವರದ್ದು. ದೇಶ-ವಿದೇಶದಲ್ಲಿ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ನೀವು ಇದನ್ನು ಇಷ್ಟಪಡಬಹುದು: ಟೆಕ್ಕಿಯಾಗಿದ್ದ ಹುಡುಗ ಈಗ ವೈಲ್ಡ್ ಲೈಫ್ ಫೋಟೋಗ್ರಾಫರ್: ಮೂಡಿಗೆರೆಯ ಸುನೀಲ್ ಸಚಿಯವರ ಕುತೂಹಲಕರ ಕತೆ
ಚಂದದ ಕ್ಯಾಲೆಂಡರ್
ಪ್ರತಿ ವರ್ಷ ತಾವು ಕ್ಲಿಕಿಸಿದ ಹಕ್ಕಿಗಳ ಪೋಟೋಗಳಿಂದ ಕ್ಯಾಲೆಂಡರ್ ಮಾಡಿಸಿ ಮಾರಾಟ ಮಾಡುತ್ತಾರೆ. ಅದರಿಂದ ಸಂಪಾದಿಸಿದ ಹಣವನ್ನು ಕರ್ನಾಟಕ ರಾಜ್ಯದ ಕಾಡಿನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ಹಾಗೆಯೇ ತಮ್ಮ ದುಡಿಮೆಯಲ್ಲಿ ವನ್ಯ ಸಂಕುಲಕ್ಕಾಗಿ ಮೀಸಲಿಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುವ ಕನ್ನಡ ಸಂಘಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರಿವಿನ ದೀಪ ಬೆಳಗಿಸಲು ಅವಿಶ್ರಾಂತವಾಗಿ ವಿಜಯ್ ಮಾಡುತ್ತಿದ್ದಾರೆ. ಕಾಡು ಉಳಿಸಲು ವೈಯಕ್ತಿಕ ಸ್ವಾರ್ಥ ಇರಬಾರದು ಎನ್ನುತ್ತಾರೆ ಅವರು.
ಬಾಲ್ಯದಲ್ಲಿ ರೀಲ್ ಕ್ಯಾಮೆರಾಗಳನ್ನು ತಗೊಂಡು ಪೋಟೋ ತೆಗೆಯುತ್ತಿದ್ದೆ. ನನ್ನನ್ನು ಯಾವತ್ತೂ ನನ್ನಪ್ಪ ನಿರಾಸೆ ಮಾಡಲಿಲ್ಲ. ಆಸಕ್ತಿಗೆ ನೀರೆರೆದರು. ನನಗೆ ಕ್ಯಾಮೆರಾಗಳನ್ನು ತಂದುಕೊಟ್ಟು ಪ್ರೋತ್ಸಾಹಿಸಿದ್ದರು. ಹೀಗೆ ಕ್ಯಾಮೆರಾದೆಡೆಗಿನ ಸೆಳೆತ ಕೊನೆಗೆ ಒಂದು ಧ್ಯೇಯಕ್ಕಾಗಿ ಪೋಟೋಗ್ರಫಿ ಮಾಡಬೇಕೆನಿಸಿತು. ಆದರೆ ಹಣಕಾಸು ಸಮಸ್ಯೆ. ದುಬಾರಿ ಬೆಲೆಯ ಕ್ಯಾಮೆರಾ ಖರೀದಿಸಲು ಆಗ್ತಾ ಇರಲಿಲ್ಲ. 2011ರಲ್ಲಿ ಆಸ್ಟ್ರೇಲಿಯಾದಲ್ಲಿ ಉದ್ಯೋಗಸ್ಥನಾದೆ, ನನ್ನಿಷ್ಟದ ಕ್ಯಾಮೆರಾ ಕೊಳ್ಳಲು ಆರ್ಥಿಕವಾಗಿ ಸದೃಢನಾದೆ. ಆ ಮೇಲೆ ಮದುವೆ ಆಯ್ತು. ಮನದರಸಿ ನನ್ನ ಹವ್ಯಾಸಕ್ಕೂ ಜೊತೆಯಾದಳು. ನನಗಿಂತಲೂ ಹೆಚ್ಚು ಕಾಡಿನ ಪ್ರೀತಿ ಅವಳಿಗೆ ಎಂದು ವಿಜಯ್ ಹೇಳುತ್ತಾರೆ.
ಬೆಟ್ಟ ಹತ್ತಿ ಹದ್ದು ನೋಡಿದ್ದು
ಮದುವೆಯಾದ ಹೊಸತರಲ್ಲಿ ಆಸ್ಟ್ರೇಲಿಯಾದ ಒಂದು ಬೆಟ್ಟದಲ್ಲಿ ಕಾಣಸಿಗುವ ಅಪರೂಪದ ಸಸ್ಯಾಹಾರಿ ಹದ್ದು ನೋಡುವ ಹುಚ್ಚು ಆಸೆ ಹುಟ್ಟಿತು. ಆದುವರೆಗೆ ನಾವು ಆಸ್ಟ್ರೇಲಿಯಾ ಹದ್ದು ನೋಡಿರಲಿಲ್ಲ. ಪ್ರಪಂಚದಲ್ಲೇ ಅತ್ಯಂತ ಗಾತ್ರ ಮತ್ತು ಎತ್ತರದಲ್ಲಿ ಎರಡನೇ ಹದ್ದು. ನಮ್ಮ ಮನೆಯಿಂದ 3000 ಕಿ.ಮೀ ದೂರದಲ್ಲಿರುವ ಪವರ್ತ ಹತ್ತಿ ಕಾಣಲು ನಿರ್ಧರಿಸಿದ್ದವು. ಆಗ ಬೇಸಿಗೆ ಬೇರೆ. ಸುಡು ಸುಡು ಬಿಸಿಲು. ಮೊಂಡುತನದಿಂದ ಪವರ್ತವೇರಿದ್ದೆವು. ಅಲ್ಲಿ ತಂಪನೆಯ ವಾತಾವರಣವು ಮನಕ್ಕೆ ಮುದ ನೀಡಿತು. ಹದ್ದುಗಳು ಕಾಣೋದು ಕಣ್ಣಿಗೆ ಹಬ್ಬ. ಆ ದಿನದ ಖುಷಿ ನನ್ನ ಬರ್ಡ್ಸ್ ಡೈರಿಯಲ್ಲೇ ಯಾವುದು ಕೊಟ್ಟಿಲ್ಲ ಎನ್ನುತ್ತಾರೆ ವಿಜಯ್.
ಫೋಟೋಗ್ರಫಿ ಕತೆಗಳು
ಭಾರತದ ಕಾಡುಗಳ ಬಗ್ಗೆ ಅಧ್ಯಯನ ಮಾಡಿದೆ. ಪ್ರಾಣಿ, ಪಕ್ಷಗಳ ಜೀವ ವೈವಿಧ್ಯತೆ ತಿಳಿಯಿತು. ಅವುಗಳ ಅರಿಯಲು ಸಾಗಿದಂತೆ ಪೋಟೋ ಕ್ಲಿಕಿಸುವ ತನ್ಮಯತೆ ಬೆಳೆಯಿತು. ಆದರೆ ಆಸ್ಟ್ರೇಲಿಯಾದ ಅರಣ್ಯಗಳ ಜ್ಞಾನಕ್ಕೆ ಗೂಗಲ್ ನೆರವಾಯಿತು. ಪ್ರತಿ ವಾರಾಂತ್ಯದಲ್ಲಿ ಗೂಗಲ್‌ನಲ್ಲಿ ಹಸಿರು, ನೀರಿನ ಪ್ರದೇಶಗಳನ್ನು ತಿಳಿಯುವುದು ಸುತ್ತಾಡುವುದು ಪ್ರಾರಂಭಿಸಿದೆ. ಬೆಳಗ್ಗೆ 6 ಗಂಟೆಗೆ ವಾಕ್ ಶುರುವಾದರೆ ಮಧ್ಯಾಹ್ನ 1-2ಗಂಟೆವರೆಗೆ ನಡೆಯುತ್ತ ಹೋಗಿದ್ದೇವೆ. ಆಗ ಕಣ್ಣಿಗೆ ಬೀಳುವ ಹಕ್ಕಿಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದವು.
ನನಗೆ ಪೋಟೋಗಳನ್ನು ವಸ್ತು ಪ್ರದರ್ಶನಕ್ಕಿಡಬೇಕು, ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂಬ ಇಚ್ಛೆಯಿಲ್ಲ. ನಾನು ತೆಗೆಯುವ ಪೋಟೋಗಳು ಜನರಿಗೆ ಕಾಡಿನ ತಿಳುವಳಿಕೆ ಮೂಡಿಸಲು ಪ್ರೇರಣೆಯಾಗಬೇಕು ಎಂಬ ಆಶಯ. ನಾನು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹಂಚಿಕೊಂಡಾಗ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಅಲ್ಲಿಂದಲೇ ನನಗೆ ಪುರಸ್ಕಾರಗಳು ಸಂದಿವೆ. ಕ್ಯಾಲೆಂಡರ್ ಮಾಡುವ ಉದ್ದೇಶ ಸಹ ಜನರಿಗೆ ಅರಿವು ಮೂಡಿಸುವುದೇ ಆಗಿ. ಕ್ಯಾಲೆಂಡರ್ ಆಗುವ ವೆಚ್ಚವನ್ನು ದೇಣಿಗೆ ಕೊಡಬಹುದು. ಆದರೆ ನನ್ನ ಉದ್ದೇಶ ಈಡೇರಲ್ಲ. ಆ ಕ್ಯಾಲೆಂಡರ್ ಖರೀದಿಸುವವರಿಗೆ ಆ ಪಕ್ಷಿ ಪೋಟೋ ನೋಡಿ ವನ್ಯಸಂಪತ್ತಿನ ಬಗ್ಗೆ ಜಾಗೃತಿ ಮೂಡಬಹುದು.
ಬಂಡೀಪುರ ಕಾಡಿನಲ್ಲಿ ಫೌಂಡೇಷನ್ ಸಹಕಾರದಲ್ಲಿ ಸೋಲಾರ್ ಪಂಪ್ ಸೆಟ್‌ಗಳನ್ನು ಅಳವಡಿಸಿದ್ದೇವು. ಅರಣ್ಯ ರಕ್ಷಕರಿಗೆ ಓಡಾಡಲು ಅನುಕೂಲವಾಗುವ ಶೂ ಸೇರಿದಂತೆ ಬಟ್ಟೆ ಪೂರೈಸಲಾಗಿತ್ತು. ಹೀಗೆ ಪ್ರತಿ ವರ್ಷ ಫೌಂಡೇಷನ್ ಒಂದು ಯೋಜನೆ ರೂಪಿಸುತ್ತದೆ. ನನ್ನ ಪಾಲಿನ ಕರ್ತವ್ಯ ನಿರ್ವಹಿಸುವೆ ಎನ್ನುತ್ತಾರೆ ವಿಜಯ್.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ