ಕಾರು ಟೂರುದೂರ ತೀರ ಯಾನವಿಂಗಡಿಸದಸಂಸ್ಕೃತಿ, ಪರಂಪರೆ

ಬೆರಗಾಗಿಸುವ ಊರ ಮಧ್ಯ ಇರುವ ಸುಂದರ ದೇಗುಲ ಯಾಗಂಟಿ ಶಿವ ಸನ್ನಿಧಿ: ಸುವರ್ಣಲಕ್ಷ್ಮಿ ಪರಿಚಯಿಸಿದ ಸುಂದರ ತಾಣ

ಕಾಡಿನ ಮಧ್ಯ ಇರುವ ಒಂದು ಚಂದದ ಊರು ಯಾಗಂಟಿ. ಆಂಧ್ರಪ್ರದೇಶದ ಕರ್ನೂಲ್ ನಿಂದ 100 ಕಿಮೀ ದೂರದಲ್ಲಿದೆ. 

ಮೈಮರೆಸುವ ಸುಂದರ ಪ್ರಕೃತಿ, ನಿಸರ್ಗ ನಿರ್ಮಿತ ಗುಹೆಗಳು, ಬೆಳೆಯುತ್ತಿರುವ ನಂದಿ, ಗುಹೆಯಲ್ಲಿ ವೆಂಕಟರಮಣಸ್ವಾಮಿ, ಗುಡಿಯಲ್ಲಿ ಉಮಾಮಹೇಶ್ವರ, ಬಸವಣ್ಣನ ಬಾಯಿಯಲ್ಲಿ ಔಷಧಿಯುಕ್ತ ನೀರು, ಕಾಗೆಗಳು ಇಲ್ಲದ ಊರು, ಸಾಲು ಸಾಲು ಪಡ್ಡು(ಗುಳಿಯಪ್ಪ ಅಥವಾ ಗುಂತಪಂಗನಾಲು) ಅಂಗಡಿಗಳು… ಓಓ ನಿಲ್ಲಿ ನಿಲ್ಲಿ ನಿಲ್ಲಿ ಇದೆಲ್ಲಾ ಯಾವ ಊರು ಅಂತ ಹೇಳಿ ಅಂತೀರಾ..

ಈ ಊರಿನ ಹೆಸರು ಯಾಗಂಟಿ. ಆಂಧ್ರಪ್ರದೇಶದ ಕರ್ನೂಲ್ ನಿಂದ 100 ಕಿಮೀ ದೂರದಲ್ಲಿದೆ. ಸಾಮಾನ್ಯವಾಗಿ ನಾವು ಪ್ರವಾಸ ಹೋಗುವಾಗ ನಾವು ಹೋಗುವ ಸ್ಥಳದ ಬಗ್ಗೆ ಕೇಳಿರುತ್ತೇವೆ. ಆದರೆ ಯಾಗಂಟಿಗೆ ಹೋಗುವವರೆಗೂ ಅಂತಹ ಒಂದು ಸ್ಥಳ ಇದೆ ಎಂಬುದೇ ನನಗೆ ತಿಳಿದಿರಲಿಲ್ಲ.  

ನಮ್ಮ ಕೆಲ ಶಿಕ್ಷಕ ಮಿತ್ರರು ಆಯೋಜಿಸಿದ್ದ ಪ್ರವಾಸದಲ್ಲಿ ಬಸ್ ಯಾಗಂಟಿಯಲ್ಲಿ ನಿಲ್ಲಿಸಿದಾಗಲೇ ಆ ಊರಿನ ಬಗ್ಗೆ ತಿಳಿದಿದ್ದು. ಬಸ್ ಇಳಿದ ತಕ್ಷಣ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ನಾನು ಫಿದಾ ಅಷ್ಟೇ. ಮುಂದುವರೆದು ನಾನು ಮೊದಲು ಕಂಡದ್ದು ಪುಷ್ಕರಣಿ. ಅದರಲ್ಲಿ ಸರ್ವಋತುಗಳಲ್ಲೂ ನೀರು ಒಂದೇ ಮಟ್ಟದಲ್ಲಿ ಇರುತ್ತದೆ ಎಂಬುದು ಸ್ಥಳೀಯರಿಂದ ತಿಳಿದ ವಿಷಯ. ಸುತ್ತಲಿನ ಬೆಟ್ಟ ಗುಡ್ಡಗಳಿಂದ ಶೇಖರವಾಗುವ ನೀರು ಔಷಧಿಯುಕ್ತವಾಗಿದ್ದು ಬಸವಣ್ಣನ ಬಾಯಿಂದ ಹೊರಬಂದು ಪುಷ್ಕರಿಣಿಯಲ್ಲಿ ಸಂಗ್ರಹವಾಗುತ್ತದೆ.

ಈ ಪುಷ್ಕರಿಣಿಯಲ್ಲಿ ಅಗಸ್ತ್ಯ ಮುನಿಗಳು ಸ್ನಾನ ಮಾಡಿದ್ದರಿಂದ ಅದಕ್ಕೆ ಅಗಸ್ತ್ಯ ಪುಷ್ಕರಿಣಿ ಎಂದು ಹೆಸರು ಬಂದಿದೆ. ಈ ಪುಷ್ಕರಿಣಿಯಲ್ಲಿ ಸ್ನಾನ ಮಾಡಿದರೆ ಅನೇಕ ಕಾಯಿಲೆಗಳು ವಾಸಿಯಾಗುತ್ತದೆ ಎಂದು ಜನರ ನಂಬಿಕೆ. ಪುಷ್ಕರಿಣಿಯಿಂದ ಮುಂದುವರೆದ ನಮಗೆ ಐದು ಅಂತಸ್ತಿನ ಸುಂದರ ಪುರಾತನ ರಾಜಗೋಪುರ ಸ್ವಾಗತ ಕೋರಿತು.

ಒಳನಡೆದ ನಮಗೆ ವಿಶಿಷ್ಟವಾದ ಶಿವಲಿಂಗ ದರ್ಶನ ನೀಡಿತು. ಆ ಶಿವಲಿಂಗದ ಮೇಲೆ ಶಿವ ಹಾಗೂ ಪಾರ್ವತಿಯ ವಿಗ್ರಹ ಕೆತ್ತಲಾಗಿದೆ. ಈ ರೀತಿಯ ಲಿಂಗ ಬೇರೆಲ್ಲೂ ಕಾಣಸಿಗುವುದಿಲ್ಲ. ಈ ದೇವಸ್ಥಾನವನ್ನು ಮೊದಲು ವೆಂಕಟರಮಣ ಸ್ವಾಮಿಯನ್ನು ಪ್ರತಿಷ್ಠಾಪಿಸಲು ಅಗಸ್ತ್ಯ ಮುನಿಗಳು ನಿರ್ಮಿಸಿದರಾದರೂ ವೆಂಕಟರಮಣಸ್ವಾಮಿಯ ವಿಗ್ರಹ ಕೆತ್ತುವಾಗ  ವಿಗ್ರಹದಲ್ಲಿ ಲೋಪ ಉಂಟಾಗಿದ್ದಕ್ಕೆ ಶಿವಲಿಂಗ ವನ್ನು ಪ್ರತಿಷ್ಠಸಲಾಯಿತೆಂದು ಪ್ರತೀತಿ. 

ಕೆತ್ತುವಾಗ ಲೋಪವಾದ ವೆಂಕಟರಮಣಸ್ವಾಮಿಯ ವಿಗ್ರಹವನ್ನು ದೇವಸ್ಥಾನ ಎಡಭಾಗದಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಗುಹೆಯಲ್ಲಿ ಕಾಣಬಹುದು. ವಿಗ್ರಹ ಕೆತ್ತುವಾಗ ಲೋಪ ಉಂಟಾಗಿದ್ದಕ್ಕೆ ಅಗಸ್ತ್ಯರು ಬೇಸರಗೊಂಡು ಸಂಕಲ್ಪ ಲೋಪವೇ ಇದಕ್ಕೆ ಕಾರಣವಿರಬಹುದು ಎಂದು ವೆಂಕಟರಮಣಸ್ವಾಮಿಯನ್ನು ಕುರಿತು ತಪಸ್ಸು ಮಾಡಲು ಪ್ರಾರಂಭ ಮಾಡುತ್ತಾರೆ. ಆಗ ಅವರ ತಪಸ್ಸಿಗೆ ಕಾಗೆಗಳ ಶಬ್ದದಿಂದ ಭಂಗವಾಗುತ್ತದೆ. ಆಗ ಅಗಸ್ತ್ಯ ಕೋಪದಿಂದ ಈ ಪ್ರಾಂತ್ಯದಲ್ಲಿ ಕಾಗೆಗಳು ಇಲ್ಲದೇ ಹೋಗಲಿ ಎಂದು ಶಪಿಸುತ್ತಾರೆ. ಅಂದಿನಿಂದ ಇಂದಿನವರೆಗೂ ಇಲ್ಲಿ ಕಾಗೆಗಳು ಕಾಣಸಿಗುವುದಿಲ್ಲ ಎನ್ನುವುದು ಇಲ್ಲಿನ ವಿಶೇಷ. 

ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

ದೇವಸ್ಥಾನ ಪಕ್ಕದಲ್ಲಿ ನೈಸರ್ಗಿಕವಾಗಿ  ನಿರ್ಮಿತವಾದ ಎರಡು ಗುಹೆಗಳು ಇದ್ದು ನಯನ ಮನೋಹರವಾಗಿದೆ. ಒಂದು ಗುಹೆಯಲ್ಲಿ ವೆಂಕಟರಮಣಸ್ವಾಮಿ ವಿಗ್ರಹ ಇದ್ದು ಮತ್ತೊಂದು ಗುಹೆಯಲ್ಲಿ ಆಂಧ್ರ ಪ್ರದೇಶದ ಸುಪ್ರಸಿದ್ಧ ಕಾಲಜ್ಞಾನಿ ವೀರ ಬ್ರಹ್ಮೇಂದ್ರಸ್ವಾಮಿಯವರು ತಪಸ್ಸು ಮಾಡಿದ ಕುರುಹುಗಳಿವೆ.

ಎಲ್ಲ ಶಿವನ ಆಲಯಗಳದಲ್ಲಿ ಇರುವಂತೆ ಶಿವನ ಮುಂದೆ ನಂದಿಯ ವಿಗ್ರಹ ಇದ್ದು ಇದು ದಿನೇ ದಿನೇ ಬೆಳೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು. ಮೊದಲು ನಾಲ್ಕು ಸ್ತಂಭಗಳ ನಡುವೆ ಇದ್ದ ನಂದಿ ಈಗ ನಾಲ್ಕು ಸ್ತಂಭಗಳನ್ನು ಮೀರಿ ಬೆಳೆದಿದೆ. ಇಪ್ಪತ್ತು ವರ್ಷಕ್ಕೆ ಒಂದು ಇಂಚಿನಷ್ಟು ಬೆಳೆಯುತ್ತಿದೆ ಎಂದು ಪುರಾತತ್ವ ಇಲಾಖೆ ಧೃಡಪಡಿಸಿದೆ. ಇಲ್ಲಿನ ನಂದಿಯ ವಿಗ್ರಹದ ಬಗ್ಗೆಯೂ ಒಂದು ಕಥೆ ಪ್ರಚಾರದಲ್ಲಿ ಇದೆ. ಇಲ್ಲಿನ ದೇವಾಲಯದಲ್ಲಿ ವೆಂಕಟರಮಣಸ್ವಾಮಿಯ ಬದಲಾಗಿ ಶಿವನನ್ನು ಪ್ರತಿಷ್ಟಿಸಿ ಶಿವನ ಮುಂದೆ ಪ್ರತಿಷ್ಠಸಲು ನಂದಿಯ ವಿಗ್ರಹ ಕೆತ್ತಲೆಂದು ಯಾವುದೇ ಕಲ್ಲನ್ನು ಆರಿಸಿದರೂ ಆ ಕಲ್ಲು ಎರಡು ಭಾಗವಾಗುತ್ತಿತ್ತು. ಆದುದರಿಂದ ಶಿವನು ತನ್ನ ನಂದಿಯನ್ನೇ ಈ ಕ್ಷೇತ್ರದಲ್ಲಿ ನೆಲಸಲು ಆದೇಶಿಸಿದನಂತೆ  ಸಾಕ್ಷಾತ್ ನಂದಿಯ ಬಂದು ಬೆಳೆಸಿದ್ದರಿಂದ ನಂದಿಯ ಬೆಳೆಯುತ್ತಿದೆ ಎಂದು ಭಕ್ತರ ಅಂಬೋಣ.

ಇದೇ ನಂದಿಯ ವಿಷಯ ವೀರಬ್ರಹ್ಮೇಂದ್ರಸ್ವಾಮಿಯವರ ವಿಜ್ಞಾನದಲ್ಲಿ ಇದೆ. ಈ ನಂದಿಯು ಎದ್ದು ನೋಡಿದಾಗ ಕಲಿಯುಗ ಅಂತ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ದೇವಸ್ಥಾನದ ಹಿಂದೆ ಬೆಟ್ಟದ ತುದಿಯಲ್ಲಿ ಒಂದು ದ್ವೀಪಸ್ತಂಭವಿದ್ದು, ಅಲ್ಲಿ ಹುಣ್ಣಿಮೆಯ ದಿನ ದೀಪ ಹಚ್ಚಿದರೆ ನಮ್ಮ ಇಚ್ಚೆ ನೆರವೇರುತ್ತದೆ ಎನ್ನುವುದೂ ಒಂದು ನಂಬಿಕೆ.

ಇಲ್ಲಿನ ಪಡ್ಡು ಅಂಗಡಿಗಳು ಪ್ರವಾಸಿಗರ ಜಿಹ್ವಾ ಚಾಪಲ್ಯ ತಣಿಸುವುದಂತೂ ಸತ್ಯ ಸತ್ಯ. ಧಾರ್ಮಿಕ ನಂಬಿಕೆಗಳು ಇಲ್ಲದವರೂ ನಲ್ಲಮಲ ಕಾಡಿನ ಮಧ್ಯೆ ಪ್ರಕೃತಿ ಸೌಂದರ್ಯ ಸವಿಯಲು, ಅಮೃತ ಸಮಾನವಾದ ಅಗಸ್ತ್ಯ ಪುಷ್ಕರಿಣಿಯ ನೀರನ್ನು ಸವಿಯಲು, ನೈಸರ್ಗಿಕ ಗುಹೆಗಳ ಸೌಂದರ್ಯ ಸವಿಯಲು, ಬೆಳೆಯುತ್ತಿರುವ ಮಂದಿಯನ್ನು ನೋಡಲು ಭೇಟಿ ನೀಡಬಹುದು.  

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button