ಆಹಾರ ವಿಹಾರನಮ್ಮೂರ ತಿಂಡಿವಿಂಗಡಿಸದ

ಗೇರುಬೀಜದ ಮೊಳಕೆಯೊಳಗೆ ಅಡಗಿದ್ದ ಕಾಂಚನದ ಗೇರುಕೂಪಿನ ನೆನಪುಗಳು

ಆಕಾಶದಿಂದ ಯಾರೋ ಸುರಿದಂತೆ ಎಡೆಬಿಡದೆ ಬರುವ ಮಳೆ, ಮಳೆಯ ಜೋರು ಸದ್ದಿಗೋ ಅಥವಾ ಅದು ತಂದ ತಿಳಿಯಾದ ಚಳಿಗೋ ಏನಾದರೂ ತಿನ್ನಲೇಬೇಕೆಂದು ಒತ್ತರಿಸಿ ಬರುವ ಆಸೆ, ಅಷ್ಟೊತ್ತಿಗೆ ಸಿಕ್ಕ ಗೇರುಬೀಜದ ಮೊಳಕೆ, ತಿಂದಾದ ಮೇಲೆ ಮಳೆ ಮುಗಿಯುವವರೆಗೆ ತೇಲಿ ಬಂದ ಒಂದಷ್ಟು ತಾಜಾ ನೆನಪುಗಳು ಎಲ್ಲವನ್ನೂ ಬರೆದಾಗ ಆಗಿದ್ದಿಷ್ಟು. ಓದಿದಾಗ ನಿಮಗೂ ಏನಾದರೂ ನೆನಪಾದರೆ ನನಗೆ ಖುಷಿ.

  • ಸುಜಯ್ ಪಿ

ಇದನ್ನು ಬರೆಯತ್ತಿರುವ ಹೊತ್ತಿಗೆ ಇಲ್ಲಿ ಜೋರು ಸಿಡಿಲು ಮಳೆ ಬರುತ್ತಿದೆ. ಸಿಡಿಲು ಬಂದಾಗ ಒಂದು ಕಡೆ ಭಯವಾದರೂ ಕೂಡಾ ಇನ್ನೊಂದೆಡೆ, ಇಂಥದ್ದೇ ಜೋರು ಮಳೆಗಾಲವೊಂದರಲ್ಲಿ ಬಸ್ಸಲ್ಲಿ ನನ್ನೊಟ್ಟಿಗೆ ಕೂತು ಎರಡು ಗಂಟೆಗಳಷ್ಟು ಕಾಲ ತೀರಾ ಆತ್ಮೀಯ ಗೆಳೆಯನಾಗಿದ್ದ ಹೆಸರು ನೆನಪಿರದ ಅಜ್ಜ‌ ಹೇಳಿದ್ದ “ಸಿಡಿಲು ಬಂದರೆ ರಾಶಿ ರಾಶಿ ಅಣಬೆ ಹುಟ್ಟಿಕೊಳ್ಳುತ್ತದೆ” ಅನ್ನುವ ಮಾತೂ ನೆನಪಾಗಿ ಅಣಬೆಯ ಆಸೆಯೂ ಆಗುತ್ತದೆ‌.

ಮಳೆ ಅಂದರೆ ಹುಡುಗಿಯ ಹಾಗೆ ಅನ್ನುತ್ತಾರಲ್ಲ ನಾನದನ್ನು ಸುಳ್ಳು ಅಂದುಕೊಂಡಿದ್ದೆ, ಆದರೆ ಈ ರಚ್ಚೆ, ಗುಡುಗು, ಕೋಪ, ರೌದ್ರತೆ, ಆಸೆ ಇದನ್ನೆಲ್ಲಾ ಮಳೆಯಲ್ಲಿ ಕೂಡಾ ನೋಡಿದ ಮೇಲೆ ಆ ಮಾತುಗಳು ನಿಜ ಇರಲೂಬಹುದೇನೋ ಅಂದುಕೊಂಡಿದ್ದಿದೆ‌.

ನಿಜ, ನನಗಂತೂ ಜೋರು ಮಳೆ ಬಂದರೆ ಏನಾದರೂ ತಿನ್ನುವ ಆಸೆಯಾಗಿಬಿಡುತ್ತದೆ. ಇವತ್ತಿನ ತಿನ್ನುವ ಆಸೆಯನ್ನು ತಣಿಸಿದ್ದು ಗೇರುಬೀಜದ ಮೊಳಕೆ. ತಿಂದ ಒಂದು ಮೊಳಕೆ ಅದೆಷ್ಟು ರುಚಿ ಇತ್ತು ಎಂದರೆ ಮೊಳಕೆ ಸಿಕ್ಕ ಮರದಡಿಯ ತರಗೆಲೆಗಳನ್ನು ಸ್ವಲ್ಪ ಹೊತ್ತು ಹುಡುಕಾಡುವಷ್ಟು. ಮೊಳಕೆಯ ಎರಡೂ ಬದಿಯನ್ನೂ ತಿಂದರೆ ಮಾತ್ರ ಅದರ ಪೂರ್ತಿ ರುಚಿ ಸಿಗಲು ಸಾಧ್ಯ.

ಚಿತ್ರಕೃಪೆ : ಸುಜಯ್ ಪಿ

ಈಗೀಗ ಅಪರೂಪವಾಗಿ ಸಿಗುವ ಈ ಗೇರುಬೀಜದ ಮೊಳಕೆ ಮತ್ತು ಸಿಡಿಲಿನೊಂದಿಗೆ ಬಂದು ಹೆದರಿಸುವ ಈ ಮಳೆ ಎರಡೂ ಸೇರಿ ಒಂದಷ್ಟು ಹೊತ್ತು ಅಷ್ಟೇನೂ ಹಳೆಯದಲ್ಲದ ಕೆಲವು ನೆನಪುಗಳನ್ನು ನೆನಪಿಸಿಬಿಟ್ಟಿತು.

ಉಪ್ಪಿನಂಗಡಿಯಿಂದ ಒಂದು ಹತ್ತು ಕಿಲೋಮೀಟರಿನಷ್ಟು ದೂರ ಶಿರಾಡಿ ಘಾಟಿ ಹೋಗುವ ದಾರಿಯಲ್ಲಿ ಕಾಂಚನ ಎಂಬ ತುಂಬಾ ಚಂದದ ಹೆಸರಿನ ಊರಿನಲ್ಲಿ ನನ್ನ ಅಜ್ಜಿಮನೆಯಿದೆ. ಸಣ್ಣವನಿದ್ದಾಗ ಶಾಲೆಯ ಬೇಸಿಗೆ ರಜೆಯಲ್ಲಿ ಅಜ್ಜಿಮನೆಗೆ ಹೋಗುವುದು ನಮ್ಮ ಜನ್ಮಸಿದ್ಧ ಹಕ್ಕು.

ನೀವುಇದನ್ನುಇಷ್ಟಪಡಬಹುದು: ಮಳೆಗಾಲದಲ್ಲಿ ಬಾಯಿ ಚಪ್ಪರಿಸಲು ಇದನ್ನು ಟ್ರೈ ಮಾಡಿ

ಕರಾವಳಿಯವರಿಗೆ ಗೊತ್ತಿರಬಹುದು, ಹಳ್ಳಿಗಳಲ್ಲಿ ಸರ್ಕಾರದ ಎಕರೆಗಟ್ಟಲೆ ದೊಡ್ಡ ದೊಡ್ಡದಾದ ಗೇರುಬೀಜದ ಮರಗಳ ಗುಡ್ಡಗಳಿರುತ್ತದೆ. ಆಡುಭಾಷೆ ತುಳುವಿನಲ್ಲಿ ‘ಬೀಜದಕೂಪು’ ಅನ್ನುತ್ತಾರೆ.

ಇದಕ್ಕಾಗಿ ಪ್ರತೀ ವರ್ಷ ಸರಕಾರ ಟೆಂಡರ್ ಕರೆಯುತಿತ್ತು. ಟೆಂಡರಲ್ಲಿ ಪೂರ್ತಿ ಗುಡ್ಡವನ್ನು ಯಾರಾದರೂ ಖರೀದಿಸುತಿದ್ದರು. ಈಗ ಯೋಚಿಸಿದರೆ ನಮ್ಮ ಊರಿನವರಾರು ಟೆಂಡರಿನಲ್ಲಿ ಗುಡ್ಡ ಖರೀದಿಸಿದ್ದನ್ನು ನೋಡಿಯೇ ಇಲ್ಲ ಅನ್ನುವುದೂ ನೆನಪಾಗುತ್ತದೆ.

ಗೇರುಬೀಜ ಪೂರ್ಣ ಫಲ ಬಂದಾಗ ಒಂದು ಹತ್ತು ಹದಿನೈದು ಜನ ಕೆಲಸದವರನ್ನು ನೇಮಿಸಿ ಅಷ್ಟು ದೊಡ್ಡ ಗುಡ್ಡದ ಮಧ್ಯದಲ್ಲಿ ಟೆಂಟಿನ ರೀತಿಯ ತಾತ್ಕಾಲಿಕ ಮನೆ ನಿರ್ಮಿಸಿಕೊಂಡು ಗೇರುಬೀಜ ಹೆಕ್ಕುತ್ತಿದ್ದರು.

ಗೇರುಬೀಜ ಹೆಕ್ಕಲು ಬರುತ್ತಿದ್ದ ಜನರೂ ಕೂಡಾ ನಮ್ಮ ಊರಿನವರಾಗಿರುತ್ತಿರಲಿಲ್ಲ ತೀರಾ ಅಪರಿಚಿತ ಮುಖಗಳಾಗಿರುತಿತ್ತು. ಅವರ ಗೇರುಗುಡ್ಡದ ಒಳಗಡೆ ಏನಾದರೂ ಹೋದರೆ ಹೊಡೆದು ಕಳಿಸುತ್ತಾರೆ ಎಂದೆಲ್ಲಾ ಮಾತುಗಳು ಚಾಲ್ತಿಯಲ್ಲಿತ್ತು. ಅವರು ಗುಡ್ಡದ ಹತ್ತಿರದ ಮನೆಗೆ ಬಂದು ನೀರು ಕುಡಿಯುವುದು, ದಣಿವಾರಿಸಿಕೊಳ್ಳುವುದೂ ನಡೆಯುತ್ತಿತ್ತು.

ಆದರೂ ಅವರ ಬಗ್ಗೆ ಊರಿನವರಿಗೆ ಒಂದು ಅದೃಶ್ಯ ಭಯ ಇದ್ದೇ ಇತ್ತು. ಪ್ರತೀ ವರ್ಷವೂ ಇದೇ ನಡೆಯುತಿತ್ತು. ಒಂದು ಮಟ್ಟಿಗೆ ಗೇರುಮರಗಳು ಫಲ ನೀಡುವುದು ನಿಲ್ಲಿಸಿದಾಗ ಅವರು ತಮ್ಮ ಕೆಲಸವನ್ನೂ ನಿಲ್ಲಿಸಿ ಹಿಂತಿರುಗುತಿದ್ದರು. ಬಿಟ್ಟು ಹೋದ ಗೇರುಗುಡ್ಡದಲ್ಲಿ ಕೆಲವು ಮರಗಳು ಇನ್ನೂ ಫಲ ಕೊಡುತ್ತಿರುತ್ತದೆ‌. ಗುಡ್ಡದ ನಟ್ಟನಡುವಲ್ಲಿ ಅವರು ಕಿತ್ತೆಸೆದ ಟೆಂಟಿನ ಅವಶೇಷಗಳು ತುಂಬಾ ಸಮಯದವರೆಗೆ ಅಲ್ಲೇ ಇರುತ್ತಿತ್ತು.

ಈಗ ಈ ಕಡೆ ಗುಡ್ಡದ ಬದಿಯ ಊರು ಒಂದು ಗಟ್ಟಿ ಉಸಿರು ಎಳೆದುಕೊಂಡು ಹೊಸತೊಂದು ಗೌಜಿಗೆ ಸಿದ್ಧವಾಗುತಿತ್ತು. ಅವರು ಹಿಂತಿರುಗಿದ್ದೇ ತಡ ಪೂರ್ತಿ ಊರೇ ತನ್ನನ್ನು ಯಾರೋ ಹಿಡಿದು ಅಲ್ಲಾಡಿಸಿದರೋ ಅನ್ನುವ ರೀತಿ ಬದಲಾಗುತಿತ್ತು. ಊರೊಳಗೆ ಹೊಸತೊಂದು ಕೆಲಸ ಶುರುವಾಗುತ್ತದೆ.

ಊರಲ್ಲಿ ಕೆಲಸವಿದ್ದ, ಕೆಲಸವಿಲ್ಲದ ಎಲ್ಲರೂ  ಗೇರುಗುಡ್ಡದ ಕಡೆಗೆ ಓಡುತ್ತಾರೆ, ಗುಡ್ಡದಲ್ಲಿ ಉಳಿದ ಗೇರುಬೀಜ ಹೆಕ್ಕಲು.

ಊರಲ್ಲಿ ಅದೊಂದು ಸಂಭ್ರಮದ ರೀತಿ. ಅದರಲ್ಲಿ ಮಕ್ಕಳು ಮುದುಕರೆಂದಿಲ್ಲ ಎದ್ದು ನಿಲ್ಲಲು ಸಾಧ್ಯವಾಗುವ ಪ್ರತಿಯೊಬ್ಬರೂ ಆಗ ಗೇರುಗುಡ್ಡ ಮರಗಳ ಬುಡದಲ್ಲೇ ಇರುತ್ತಿದ್ದರು.

ಊರಲ್ಲಿ ಬಹುತೇಕ ಎಲ್ಲರಿಗೂ ಅಡಿಕೆ, ತೆಂಗು ರಬ್ಬರ್ ತೋಟಗಳಿದ್ದು ಆರ್ಥಿಕವಾಗಿ ಸ್ವಲ್ಪಮಟ್ಟಿಗಾದರೂ ಗಟ್ಟಿಯಾಗಿಯೇ ಇದ್ದವರು. ಗೇರುಗುಡ್ಡದಲ್ಲಿ ಬಿದ್ದಿರುವ ಬೀಜಗಳಿಂದಲೇ ಬದುಕು ನಡೆಯಬೇಕಿರಲಿಲ್ಲ.

ಆದರೂ ಊರವರಿಗೆಲ್ಲ ಇದೊಂದು ಖುಷಿ, ಮನೆಯವರೆಲ್ಲಾ ಒಂದೊಂದು ಚೀಲ ಹಿಡಿದುಕೊಂಡು ಸರಕಾರಿ ಮರದಲ್ಲಿ ಬೆಳೆದ ಗೇರುಬೀಜ ಹೆಕ್ಕಲು ಇನ್ನಿಲ್ಲದ ಪೈಪೋಟಿ ನಡೆಯುತಿತ್ತು. ದಿನವೊಂದಕ್ಕೆ ಎರಡರಿಂದ ಮೂರು ಕೇಜಿ ಗೇರು ಹೆಕ್ಕುವವರೂ ಇದ್ದರು.

ಸಣ್ಣಗೆ ಮಳೆಯೂ ಬರುತ್ತಿದ್ದ ಆ ಸಮಯದಲ್ಲಿ ಎಷ್ಟು ಹೆಕ್ಕಿದರೂ ಸುಸ್ತೇ ಅನಿಸುತ್ತರಲಿಲ್ಲ. ಮಕ್ಕಳೆಲ್ಲ ತಮಗೆ ಸಿಕ್ಕ ಗೇರುಬೀಜವನ್ನು ಬೇರೆ ಬೇರೆ ಹಾಕಿ ಒಬ್ಬರಿಗೊಬ್ಬರು ಅಳೆಯುತಿದ್ದರು.

ಬೇಸಿಗೆಯಲ್ಲಿ ನಮಗೆ ರಜೆ ಸಿಗುವುದೂ ಗೇರುಬೀಜದವರು ಗುಡ್ಡ ಬಿಟ್ಟು ಹೋಗುವುದೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ನಡೆಯುತಿತ್ತು. ಹಾಗಾಗಿ ಊರಿನ ಈ ಸಣ್ಣ ಕ್ರಾಂತಿಯಲ್ಲಿ ನಮ್ಮ ಪಾಲೂ ಇರುತ್ತಿತ್ತು.

ನಾನೂ ಹಲವು ಬಾರಿ ಗೇರುಗುಡ್ಡಕ್ಕೆ ಹೋಗಿದ್ದಿದೆ. ನನಗೋ ಗೇರುಬೀಜಕ್ಕಿಂತ ಹೆಚ್ಚು ಸಂತಸ ಕೊಟ್ಟಿದ್ದು ಬೀಜದ ಮೊಳಕೆ. ಗೇರುಮರದ ತರಗೆಲೆಗಳ ಅಡಿಯಲ್ಲಿ ನಾನು ಹುಡುಕಿದ್ದು ಬೀಜಕ್ಕಿಂತ ಜಾಸ್ತಿ ಇದೇ ಮೊಳಕೆಯನ್ನು. ಬೀಜದಿಂದ ಸರಿಯಾಗಿ ಹೊರಬರದ ಮೊಳಕೆಯನ್ನು ನಾಜೂಕಿನಿಂದ ಗುದ್ದಿ ತೆಗೆಯುವ ವಿದ್ಯೆಯೂ ಕರಗತವಾಗಿತ್ತು.

ಹಾಗೆ ಗುದ್ದುವಾಗ ಸ್ವಲ್ಪ ಹೆಚ್ಚುಕಡಿಮೆಯಾದರೂ ಕೈಯಲ್ಲಿ ಸೊನೆ ಅಂಟಿ ಕಲೆಯಾಗಿಬಿಡುತಿತ್ತು. ಆ ಸಾಹಸದಲ್ಲಿ ಕಲೆಯ ಭಯಕ್ಕಿಂತ ಜಾಸ್ತಿ ಬೀಜದ ಮೊಳಕೆಯ ರುಚಿಯ ಖುಷಿ ಇರುತ್ತಿತ್ತು. ನಮ್ಮ ರಜೆಗೆ ಒಂದಷ್ಟು ಹುರುಪು ಕೊಡುತ್ತಿದ್ದದ್ದು ಕೂಡಾ ಈ ಗೇರುಗುಡ್ಡಗಳೇ ಎಂದರೂ ತಪ್ಪಾಗಲಾರದು.

ಶಾಲೆ, ಬೇಸಿಗೆರಜೆ, ಅಜ್ಜಿಮನೆ ಇಂತಹ ಜೇನಿನಷ್ಟು ಸಿಹಿಯಾದ ಪದಗಳು ಬದುಕಲ್ಲಿ ಬರದಷ್ಟು ದೊಡ್ಡವರಾದ ಮೇಲೆ ‘ಬೀಜದಕೂಪಿ’ನೊಳಗೆ ಹೋಗಿಯೇ ಇಲ್ಲ.

ಈ ಬರಹ ಮುಗಿಯುವಾಗ ಇಲ್ಲಿ ಬರುತ್ತಿದ್ದ ಮಳೆಯೂ ನಿಂತಿದೆ. ಗೇರುಬೀಜದ ಮೊಳಕೆಯೊಳಗಡಗಿದ್ದ ಗೇರುಕೂಪಿನ ನೆನಪುಗಳನ್ನು ಹೊರತಂದ ಸಿಡಿಲು ಮತ್ತು ಮಳೆಗೆ ಧನ್ಯವಾದಗಳು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

10 Comments

  1. ತುಂಬಾ ಚೆನ್ನಾಗಿ ಕಥೆ ಮೂಡಿ ಬಂದಿದೆ. ಖುಷಿ ಆಯ್ತು ನಿಮ್ಮ ಕಥೆ ಓದಿ .

  2. ಎರಡು ದಿನದ ಹಿಂದಷ್ಟೇ ಬಂದ ಮಳೆಯನ್ನು ಲೆಕ್ಕಿಸದೆ ಎಂಥಾ ವಿಚಿತ್ರ ಮಳೆ ಎಂದು ಬೈದುಕೊಂಡಿದ್ದೆ ಆದ್ರೆ ಈಗ ನಿಮ್ ಸ್ಟೋರಿ ಓದಿದ್ ಮೇಲೆ ಪುನಃ ಆಹ್ ಮಳೆ ಯಾವಾಗ ಬರೋದು ಅಂತ ಅನಿಸ್ತಿದೆ.. anyway great structure of phrases, well felt and we’ll written, all the best ಸುಜಯ್.

  3. Very well written & explained ..! Keep on writing it cherish us the childhood days and the rain is compared to the girl is one of the beautiful line

Leave a Reply

Your email address will not be published. Required fields are marked *

Back to top button