ಕಾಡಿನ ಕತೆಗಳುವಿಂಗಡಿಸದವಿಸ್ಮಯ ವಿಶ್ವ

ಕಿರೀಟದ ಮೇಲೆ ಕಾಲಿಟ್ಟು: ಮಾಕೋನಹಳ್ಳಿ ವಿನಯ ಮಾಧವ ಬರೆದ ಕಾಡಿನ ಕಥನ

ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಹಿಡಿತ ಇರುವ ಖ್ಯಾತ ಪತ್ರಕರ್ತ. ಓದಿಸಿಕೊಂಡು ಹೋಗುವಂತೆ ಬರೆಯುವ ಸೊಗಸಾದ ಬರಹಗಾರ. ಕಾಡು ಉಳಿಸಲು ಹೋರಾಟಕ್ಕೂ ಇಳಿಯಲು ಹಿಂಜರಿಯದ ಕಠೋರ ಪರಿಸರ ಪ್ರೇಮಿ. ಆಗಾಗ ಎದ್ದು ಟ್ರೆಕ್ಕಿಂಗ್ ಹೋಗುವ ಪ್ರವಾಸಿಗ. ಪೂರ್ತಿ ಹೆಸರು ಮಾಕೋನಹಳ್ಳಿ ವಿನಯ ಮಾಧವ. ಅವರು ಬರೆಯುವ ಕಾಡಿನ ಕತೆಗಳು ನಿಜಕ್ಕೂ ರೋಚಕ. 

ಈ ಸಲ ಹೇಗಾದರೂ ಮಾಡಿ ಅಲ್ಲಿಗೆ ತಲುಪಲೇ ಬೇಕು ಅಂತ ನಿಶ್ಚಯ ಮಾಡಿದ್ದೆ. 2014ರ ಡಿಸೆಂಬರ್. ಹೋದ ವರ್ಷ ಬೆಳಗಾವಿಗೆ ಬಂದವನು, ವಾರಾಂತ್ಯದಲ್ಲಿ ದಾಂಡೇಲಿ (Dandeli) ಮತ್ತು ಕ್ಯಾಸೆಲ್ ರಾಕ್ (Castle Rock) ಕಡೆಗೆ ಹೋಗಿದ್ದೆ. ಆವಾಗಲೇ ನನ್ನ ತಲೆಗೆ ಈ `ಕಿರೀಟ’ದ ಮೇಲೊಂದು ಕಾಲು ಇಡಬೇಕು ಎನ್ನುವ ಬಯಕೆ ಶುರುವಾಗಿದ್ದು. ಹಾಗಾಗಿ, ಖುಯೇಶಿಯವರೆಗೆ ಹೋದವನಿಗೆ, ಅಲ್ಲಿಂದ ಮುಂದಕ್ಕೆ ಹೋಗಲು ಅನುಮತಿ ಸಿಗಲೇ ಇಲ್ಲ.

ಆದರೆ, ವಾಪಾಸ್ ಬರುವ ಹೊತ್ತಿಗೆ ಮುಂದಿನ ದಾರಿ ಹೇಗಿದೆ ಮತ್ತು ಅಲ್ಲಿ ಏನಿದೆ ಎನ್ನುವುದರ ಬಗ್ಗೆ ವಿವರವಾಗಿ ತಿಳಿದುಕೊಂಡು ಬಂದಿದ್ದೆ. ಖುಯೇಶಿಯಿಂದ ಎರಡು ಕಿಲೋಮೀಟರ್ ಮುಂದಕ್ಕೆ ಹೋದರೆ, ಅಲ್ಲಿ ಅರಣ್ಯ ಇಲಾಖೆಯ (forest department) ಕಳ್ಳಬೇಟೆ ತಡೆಯುವ ಶಿಬಿರವಿದೆ. ಅಲ್ಲಿಯವರೆಗೆ ಹೋದಾಗ, ಅಲ್ಲಿದ್ದ ಸಿಬ್ಬಂಧಿ ನನ್ನನ್ನು ತಡೆದಿದ್ದರು.

ಅಲ್ಲಿಂದ ಮುಂದೆ ಅಣಶಿ-ದಾಂಡೇಲಿ ಹುಲಿ ಸಂರಕ್ಷಣಾ ಪ್ರದೇಶ ಶುರುವಾಗುವುದರಿಂದ, ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದರೆ, ಕಾಡಿನೊಳಗೆ ಐದು ಕಿಲೋಮೀಟರ್ ದೂರ ನೆಡೆದುಕೊಂಡು ಹೋದರೆ, ಒಂದು ಹಳ್ಳ ಸಿಗುತ್ತದೆ. ಅದು ಕರ್ನಾಟಕ ಮತ್ತು ಗೋವಾ ಗಡಿ. ಹಳ್ಳ ದಾಟಿಕೊಂಡು, ಮತ್ತೆ ಮೂರು ಕಿಲೋಮೀಟರ್ ನೆಡೆದರೆ, ಅಲ್ಲಿಂದ ಪಾಂಡರಾ ನದಿ, ಕರ್ನಾಟಕದಲ್ಲಿ ಹರಿದುಕೊಂಡು ಬಂದು, ವಿಶ್ವವಿಖ್ಯಾತ `ಧೂದ್ ಸಾಗರ್’ (Dudhsagar) ಜಲಪಾತವಾಗಿ ಗೋವಾಗೆ ಧುಮುಕುತ್ತದೆ. ಆ ಜಾಗಕ್ಕೆ ಬ್ರಿಟೀಷರು ಪ್ರೀತಿಯಿಂದ ಇಟ್ಟ ಹೆಸರೇ, `ಕ್ರೌನ್’ ಅಥವಾ ಕಿರೀಟ.

ಪಾಂಡರಾ ಎನ್ನುವುದು ಮರಾಠಿ ಅಥವಾ ಕೊಂಕಣಿ ಹೆಸರು. ಇದರ ಅರ್ಥ, ಹಾಲಿನಂತೆ ಬಿಳುಪು. ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ, ಹರಿಯುವ ಕಾಳಿ ನದಿ ಎಷ್ಟೊಂದು ಪ್ರಸಿದ್ದವಾಗಿದೆಯೋ, ಈ ನದಿಯ ಹೆಸರ ಪಂಡರಾ ಎನ್ನುವುದು ನನಗೆ ಅಲ್ಲಿಗೆ ಹೋಗುವವರೆಗೆ ತಿಳಿದಿರಲಿಲ್ಲ. ಆದರೆ, ಈ ಸಲ ಹೋಗುವುದು ಹೇಗೆ ಎನ್ನುವುದು ಸಮಸ್ಯೆಯಾಗಿತ್ತು.

ವಾರಾಂತ್ಯಕ್ಕೆ ದಾಂಡೇಲಿಗೆ ಬಂದಾಗ, ಅಲ್ಲಿ ನನ್ನ ಹಳೇ ಸಹಪಾಠಿ ಸತೀಶ್, ಜಗಲ್ ಬೇಟ್ ವಲಯಾಧಿಕಾರಿಯಾಗಿದ್ದ. ಕಾಡಿನಲ್ಲೇ ಹೆಚ್ಚಿನ ಕಾಲ ಕಳೆಯುವ ಅವನಿಗೆ, ನನ್ನ ಜೊತೆ ಕಾಡು ಸುತ್ತುವುದರಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. `ಎಲ್ಲಿ ಹೋಗ್ಬೇಕೂ ಅಂತ ಹೇಳಪ್ಪಿ, ನಾನು ವ್ಯವಸ್ಥೆ ಮಾಡ್ತೀನಿ. ನೀ ಹೋಗ್ಬಾ. ನಂಗೆ ಇಲ್ಲೇ ಕೆಲಸ ತುಂಬಾ ಇರ್ತದೆ,’ ಎಂದು ಹೇಳುತ್ತಿದ್ದ.

ಹಿಂದಿನ ಸಲ ನಾನು ಅವನ ಜೊತೆ ಹೋಗಿದ್ದಾಗ, ಅವನನ್ನು ಕರೆದುಕೊಂಡು ಹೋದ ಜಾಗಗಳನ್ನು ನೋಡಿ ದಂಗಾಗಿದ್ದ. `ಎಲ್ಲಿಂದ ಬರ್ತೀಯೋ ನೀನು? ನಿನಗೇನು ಕಾಡಲ್ಲಿ ನೆಡೆಯೋದು ಅಂದ್ರೆ ಆಟನಾ? ನಿಂಜೊತೆ ಎರಡು ದಿನ ಬಂದಿದ್ದಕ್ಕೆ, ನಾನು ಎರಡು ದಿನ ರೆಸ್ಟ್ ತಗೋ ಬೇಕಾಗುತ್ತೆ. ನನ್ನ ಎಲ್ಲಾ ಕೆಲಸ ಹಾಳು. ಎಲ್ಲಾದ್ರೂ ಹೋಗಿ ಸಾಯಿ, ನಾನು ಬರೋಲ್ಲ,’ ಅಂತ ಹೇಳಿದ್ದ.

ಆದರೆ, ನನಗೆ ಕ್ರೌನ್ ತಲುಪಬೇಕಾದರೆ, ಸತೀಶ್ ಬರದಿದ್ದರೆ ಸಾಧ್ಯವಿಲ್ಲ ಎನ್ನುವು ಸತ್ಯ ಗೊತ್ತಿತ್ತು. ಶುಕ್ರವಾರ ರಾತ್ರಿ, ನನ್ನ ಗೆಳೆಯ ರತನ್ ರೆಸಾರ್ಟಿಗೆ ಊಟಕ್ಕೆ ಹೋದಾಗ, ಮೆಲ್ಲಗೆ ವಿಷಯ ಎತ್ತಿದೆ. `ಅಲ್ವೋ… ನಾಳೆ ಎರಡನೇ ಶನಿವಾರ. ರಜೆ ಇದೆ. ಖುಯೇಶಿಯಿಂದ ಎರಡು ಕಿಲೋಮೀಟರ್ ಅಷ್ಟೆ ಕಣೋ. ಅಲ್ಲಿ ನಿಮ್ಮ ಶಿಬಿರ ಇದೆಯಲ್ಲ, ಅಲ್ಲಿಂದ ಮುಂದೆ ಒಂದು ಹಳ್ಳ ಇದೆ. ಅಲ್ಲಿಂದ ಮೂರೇ ಕಿಲೋಮೀಟರ್ ಅಷ್ಟೆ. ಏನಪ್ಪಾ? ಬಾಳಾ ಸುಸ್ತಾಗುತ್ತಾ’ ಅಂತ ಕೇಳಿದ.

`ಇಲ್ರೀ…. ನಾಲ್ಕೈದು ವರ್ಷದ ಕೆಳಗ್ ನಾ ಹೋಗೀನಿ. ಮೂರು ಕಿಲೋಮೀಟರ್ ಜಾಸ್ತಿ ಇದೇರಿ,’ ಎಂದು ರತನ್ ಬಾಯ್ಬಿಟ್ಟ. ಸತೀಶ್, ರತನ್ ಕಡೆ ತಿರುಗಿದ ತಕ್ಷಣ ನಾನು ತುಟಿಯ ಮೇಲೆ ಬೆರಳಿಟ್ಟು, ಏನೂ ಮಾತನಾಡದಂತೆ ಹೇಳಿ, `ಇಲ್ರೀ… ಆ ಹಳ್ಳದವರೆಗೆ ಜೀಪ್ ಹೋಗುತ್ತಂತ್ರೀ… ಅಲ್ಲಿಂದ ಏನು ಮಹಾ ದೂರ?’ ಎಂದು ಕೇಳಿದೆ.

`ಹಾಗಾದ್ರ ಚಲೋ ಬಿಡ್ರಿ…. ಹಳ್ಳದಿಂದ ಬಾಳಾ ಏನ್ ದೂರ್ ಇಲ್ಲ,’ ಎಂದು ರತನ್ ಹೇಳಿದರು.

ಮಾರನೇ ದಿನ ಬೆಳಗ್ಗೆ ತಿಂಡಿ ಮುಗಿಸಿ, ಮಧ್ಯಾಹ್ನ ಊಟಕ್ಕೆ ಬುತ್ತಿ ಕಟ್ಟಿಸಿಕೊಂಡು ಸೀದ ಖುಯೇಶಿಗೆ ತಲುಪಿದೆವು. ಖುಯೇಶಿ ಒಂದು ಸಣ್ಣ ಮತ್ತು ಅತೀ ಸುಂದರವಾದ ಊರು. ಹತ್ತು ಅಡಿಯ ರಸ್ತೆಯ ಆಚೆ ಮತ್ತು ಈಚೆ ಬದಿಯಲ್ಲಿ ಅಂಗಡಿ, ಮನೆಗಳು ಮತ್ತು ಹೋಟೆಲ್ ಗಳು ಇರುವ ಈ ಊರಿನಲ್ಲಿ, ಫುಟ್ ಪಾತ್ ಇಲ್ಲ. ಊರನ್ನು ಬಳಸಿಕೊಂಡು ಅರಣ್ಯ ಇಲಾಖೆಯ ಶಿಬಿರ ತಲುಪಿದಾಗ ನಮ್ಮನ್ನು ಸ್ವಾಗತಿಸಿದ್ದು ಬಿದಿರಿನಿಂದ ಕಟ್ಟಿ, ಹುಲ್ಲು ಹೊದೆಸಿದ್ದ ಮೂರು ಗುಡಿಸಲುಗಳು.

ಸತೀಶನನ್ನು ನೋಡಿದ ತಕ್ಷಣ ಸಲ್ಯೂಟ್ ಹೊಡೆದ ಅಲ್ಲಿನ ಸಿಬ್ಬಂಧಿಗಳು, ತಮ್ಮ ಮೇಲಧಿಕಾರಿಗಳು ನಾವು ಬರುವುದನ್ನು ತಿಳಿಸಿದ್ದಾರೆ ಎಂದು ಹೇಳಿದರು. ಗುಡಿಸಿಲುಗಳಾದರೂ, ಸ್ವಚ್ಚವಾಗಿ ಇಟ್ಟಿದ್ದರು. ನಮಗೆಲ್ಲ ಕುಡಿಯಲು ಹಾಲಿಲ್ಲದ ಚಹ ಕೊಟ್ಟು, ಅಲ್ಲಿಂದ ಮುಂದೆ ಹೊರಟೆವು.

`ಎಷ್ಟು ದೂರ?’ ಎಂದು ಸತೀಶ್ ಕೇಳಿದ.

`ಎಂಟರಿಂದ, ಒಂಬತ್ತು ಕಿಲೋಮೀಟರ್. ಸ್ವಲ್ಪ ದೂರು ಜೀಪ್ ಹೋಗುತ್ತದೆ. ಅಲ್ಲಿಂದ ನೆಡೆದುಕೊಂಡು ಹೋಗಬೇಕು. ನಾವು ಆ ಕಡೆ ಹೋಗಿ ಒಂದೆರೆಡು ವರ್ಷ ಆಗಿವೆ. ಇನ್ನೊಂದು ಕ್ಯಾಂಪಿನವರು ಆ ಕಡೆ ನೋಡಿಕೊಳ್ಳುತ್ತಾರೆ. ಹಾಗಾಗಿ, ರಸ್ತೆ ಎಲ್ಲಿಯವರೆಗೆ ಹೋಗುತ್ತದೆ ಅನ್ನೋದು ಗೊತ್ತಿಲ್ಲ,’ ಎಂದು ಹೇಳಿದ.

ನನ್ನನ್ನೇ ದುರುಗುಟ್ಟಿ ನೋಡಿದ ಸತೀಶ, `ಗೊತ್ತಿತ್ಲೇ ನಿನ್ ಕಥೆ. ಇಂಥದ್ದೇ ಏನೋ ಮಾಡ್ತೀಯಾ ಅಂತ,’ ಅಂದ.

`ಇರ್ಲಿ ಬಾರೋ… ನೋಡೋ. ನಾನ್ ಬರ್ದೇ ಇದ್ದಿದ್ರೆ, ನೀನು ಖುಯೇಶಿ ಹೇಗಿದೆ ಅಂತನಾದ್ರೂ ನೋಡ್ತಿದ್ದಾ? ಎಷ್ಟು ಚಂದ ಇರ್ಲಿಲ್ವಾ?’ ಎಂದೆ.

ನೀವು ಇದನ್ನು ಇಷ್ಟಪಡಬಹುದು: ಭೂತಾನಿನಲ್ಲಿ ಒಂದು ಕರಾಳ ರಾತ್ರಿ: ಸ್ಕಂದ ಪ್ರಸಾದ್ ಬರೆದ ಮರೆಯಲಾಗದ ಟ್ರೆಕ್ಕಿಂಗ್ ಕತೆ

`ಅದು ಸರಿ ಅನ್ನು. ಕ್ಯಾಸಲ್ ರಾಕ್ ಗೆ ಬಂದು, ಹಾಗೇ ವಾಪಾಸ್ ಹೋಗ್ತಿದ್ದೆ. ಇದೂ ಆಗ್ಲಿ ಬಾರಪ್ಪಾ….’ ಅಂತ ಗೊಣಗುತ್ತಾ ಜೀಪು ಹತ್ತಿದ. ಆದರೆ, ಜೀಪು ಹೋಗುವಂಥಹ ದಾರಿ ಇದ್ದದ್ದು ಒಂದೂವರೆ ಕಿಲೋಮೀಟರ್ ಮಾತ್ರ. ಅಲ್ಲಿ ಗಿಡಗಳು ಎಷ್ಟು ಒತ್ತೊತ್ತಾಗಿ ಬೆಳೆದಿದ್ದವೆಂದರೆ, ಕಾಲು ದಾರಿ ಬಿಟ್ಟರೆ ಇನ್ನೇನೂ ಇರಲಿಲ್ಲ. ಜೀಪನ್ನು ಅಲ್ಲೇ ನಿಲ್ಲಿಸಿ ನೆಡೆಯಲು ಶುರು ಮಾಡಿದೆವು.

ಈ ಉತ್ತರ ಕನ್ನಡ ಮತ್ತು ಬೆಳಗಾವಿಯ ಕಡೆ ಇರುವ ನಿತ್ಯ ಹರಿದ್ವರ್ಣ ಕಾಡುಗಳಿಗೂ, ಹಳೇ ಮೈಸೂರು ಪ್ರಾಂತ್ಯದ ಕಾಡುಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಹೆಚ್ಚಾಗಿ ಕಾರೆ ಗಿಡಗಳು ಕೆಳಗಡೆ ಬೆಳೆದಿರುತ್ತವೆ ಮತ್ತು ದೊಡ್ಡ ದೊಡ್ಡ ಮರಗಳು, ಹೆಚ್ಚಿನವು ಹಣ್ಣಿನ ಮರಗಳು ಬೆಳೆದಿರುತ್ತವೆ. ಮೈಸೂರು ಪ್ರಾಂತ್ಯದ ಕಾಡುಗಳಿಗೆ ಹೋಲಿಸಿದರೆ, ಇಲ್ಲಿ ಹುಲ್ಲುಗಾವಲುಗಳು ಕಡಿಮೆ. ಹಾಗಾಗಿ, ಯಥೇಚ್ಚವಾಗಿ ಕಾಳಿಂಗ ಸರ್ಪ, ಹೆಬ್ಬಾವುಗಳು ಇದ್ದರೂ, ಜಿಂಕೆ, ಹುಲಿಯಂಥ ಪ್ರಾಣಿಗಳ ಸಂಖ್ಯೆ, ಚದರ ಕಿಲೋಮೀಟರ್ ಲೆಖ್ಖದಲ್ಲಿ ಕಡಿಮೆ ಇರುತ್ತವೆ. ಒಂದಾನೊಂದು ಕಾಲದಲ್ಲಿ ಹೇರಳವಾಗಿದ್ದ ಕಾಟಿ, ಆನೆಗಳು ಸಹ ಕಡಿಮೆಯಾಗಿವೆ.

ಆದರೆ, ಸೂರ್ಯ ನೆಲ ತಲುಪಲು ತಿಣುಕಾಡುವ ಈ ಕಾಡುಗಳ ಮಧ್ಯೆ ನೆಡೆಯುವುದು ಅಧ್ಬುತವಾದ ಅನುಭವ. ಎಲ್ಲೆಂದರಲ್ಲಿ ಝರಿಗಳು ಹರಿಯುತ್ತಿರುತ್ತವೆ. ಹಕ್ಕಿಗಳಿಗಂತೂ ಸ್ವರ್ಗ. ಆದರೆ, ಮರಗಳ ನಡುವೆ ದರ್ಶನ ಬಹಳ ದುರ್ಲಭ. ಅವುಗಳ ಸಂಗೀತ ಕೇಳುತ್ತಾ, ಅವುಗಳು ಇರುವ ಜಾಗವನ್ನು ಅಂದಾಜು ಮಾಡುತ್ತಾ ಹುಡುಕಬೇಕು. ನನ್ನ ದುರಾದೃಷ್ಟಕ್ಕೆ, ನಾನು ಹೊರಟಿದ್ದು ಒಂದು ವಾಚಾಳಿಗಳ ಗುಂಪಿನ ಜೊತೆ. ಹಕ್ಕಿಗಳೇನು, ಇವರ ಮಾತಿಗೆ ಹುಲಿ ಬಂದರೂ ಹೆದರಿ ಓಡಿ ಹೋಗಬೇಕಿತ್ತು, ಅಷ್ಟೆ.

ನಾವು ಜೀಪಿನಿಂದ ಇಳಿದು ಹೊರಟ ಜಾಗದಿಂದ, ಕಾಲು ರಸ್ತೆ ನಿಧಾನವಾಗಿ ಇಳಿಮುಖವಾಗಿತ್ತು. ನಾನು ಮನಸ್ಸಿನಲ್ಲೇ ಲೆಖ್ಖ ಹಾಕಿದ ಪ್ರಕಾರ, ನಾವು ವಾಪಾಸು ಬರುವಾಗ, ಕೊನೆಯ ಐದು ಕಿಲೋಮೀಟರ್, ಹೆಚ್ಚೇನೂ ಕಡಿದಾಗಿರುವುದಿಲ್ಲ. ಇದು ಚಾರಣದ ಸಮಯದಲ್ಲಿ ಯಾವಾಗಲೂ ಸಮಾಧಾನಕರ ವಿಷಯ. ಏಕೆಂದರೆ, ವಾಪಾಸ್ ಬರುವ ಹೊತ್ತಿಗೆ ಸುಸ್ತಾಗಿ ಹೋಗಿರುತ್ತೇವೆ. ಅದರ ಜೊತೆ ಕಡಿದಾದ ಪ್ರದೇಶ ಹತ್ತಬೇಕು ಎಂದರೆ, ರೇಜಿಗೆಯಾಗಲು ಶುರುವಾಗುತ್ತದೆ.

ಹೀಗೇ ಒಂದು ಘಂಟೆ ನಡೆದ ಮೇಲೆ, ವಿಶಾಲವಾದ ಹಳ್ಳ ಎದುರಿಗೆ ಬಂತು. ಪ್ರಶಾಂತವಾಗಿ ಹರಿಯುತ್ತಿದ್ದ ಈ ಹಳ್ಳವೇ ಕರ್ನಾಟಕ ಮತ್ತು ಗೋವಾ ಗಡಿ. ಆ ಹಳ್ಳ ದಾಟಿದ ಮೇಲೆ, ರಸ್ತೆ ಒಂದು ಕಿಲೋಮೀಟರ್ ಸ್ವಲ್ಪ ಕಡಿದಾಗಿತ್ತು. ಅಲ್ಲಿ, ನಮ್ಮ ಬಲಗಡೆಯಿಂದ ಇನ್ನೊಂದು ಕಾಲು ದಾರಿ ಬಂದು ಸೇರಿಕೊಂಡಿತು.

`ಇದು ಸರ್… ಗೋವಾದ ಕಡೆಯಿಂದ ಇಲ್ಲಿಗೆ ಟೂರಿಸ್ಟ್ ಗಳನ್ನು ಕರೆದುಕೊಂಡು ಬರೋ ದಾರಿ. ಇಲ್ಲಿಂದ ಐದು ಕಿಲೋಮೀಟರ್ ದೂರದಲ್ಲಿ ಕ್ಯಾಂಪ್ ಇದೆ. ಅಲ್ಲಿ ಉಳಿದುಕೊಂಡಿರುತ್ತಾರೆ,’ ಎಂದು ಅರಣ್ಯ ಸಿಬ್ಬಂದಿ ಹೇಳಿದು. ಅಲ್ಲಿಂದ ರಸ್ತೆ ಅಷ್ಟೇನು ಕಡಿದಾಗಿರಲಿಲ್ಲ. ಸ್ವಲ್ಪ ಮುಂದೆ ಹೋದ ತಕ್ಷಣ, ಎಡಗಡೆ ಮತ್ತೆ ಹಳ್ಳ ಸಿಕ್ಕಿತು. `ಅದೇ ಹಳ್ಳ ಸರ್, ಇದು. ಪಾಂಡರಾ ನದಿಗೆ ಸೇರುತ್ತೆ. ಅದರ ಮೇಲೆ ಮರದಲ್ಲಿ ನೋಡಿ. ಗೋವಾ ಫಾರೆಸ್ಟ್ ಡಿಪಾರ್ಟ್ ಮೆಂಟಿನವರು ಕಟ್ಟಿರೋ `ಟ್ರಿ ಹೌಸ್’. ಅಲ್ಲಿ ಮೊದಲು ಬರೀ ಫಾರಿನರ್ಸ್ ನ ಬಿಡ್ತಿದ್ರು. ಈಗ ನಿಲ್ಲಿಸಿದ್ದಾರೆ,’ ಎಂದು ಹೇಳಿದ.

`ತಲೆ ಹರಟೆಗಳು,’ ಅಂತ ಮನಸ್ಸಲ್ಲೇ ಬೈದುಕೊಂಡು ಸುಮ್ಮನಾದೆ.

ನಿಧಾನವಾಗಿ ರಸ್ತೆ ಕಡಿದಾಗುತ್ತಾ ಹೋಯಿತು. ಎಲ್ಲೋ ದೂರದಲ್ಲಿ ನೀರಿನ ಸಪ್ಪಳ ಕೇಳಿಸಲು ಶುರುವಾಯಿತು. ಮುಂದೆ ಹೋಗುತ್ತಿದ್ದ ಸಿಬ್ಬಂದಿ ನಿಂತವನೇ, `ಸರ್, ಇಲ್ಲಿಂದ ಹುಶಾರಾಗಿ ಇಳಿಯಬೇಕು. ಸ್ವಲ್ಪ ಸ್ಟೀಪ್ ಇದೆ. ಬಿದ್ದರೆ ನೀರಿನವರೆಗೂ ಉರುಳಬಹುದು. ಹುಷಾರು,’ ಎಂದ.

ನಾನು ಹಾಗೇ ಬಗ್ಗಿ ನೋಡಿದೆ. ಸುಮಾರು ನೂರು ಮೀಟರ್ ಕೆಳಗೆ, ಮರಗಳ ನಡುವಿನಿಂದ ಅಸ್ಪಷ್ಟವಾಗಿ ನೀರು ಹರಿಯುವುದು ಕಂಡಿತು. ಹಾಗೆಯೇ, ಪಕ್ಕದಲ್ಲಿ ಕಪ್ಪಗೆ ಕಾಣುತ್ತಿದ್ದದ್ದನ್ನು ಮತ್ತೆ ದಿಟ್ಟಿಸಿ ನೋಡಿದಾಗ ಗೊತ್ತಾಯಿತು… ಅದು ಬಂಡೆ ಅಂತ. ಎದೆ ಹೊಡೆದುಕೊಳ್ಳಲು ಆರಂಭವಾಯಿತು. ನನಗೆ ಕಿರೀಟದ ಮೊದಲ ದರ್ಶನವಾಗಿತ್ತು. ಅರಣ್ಯ ಸಿಬ್ಬಂದಿಗಳು ನನ್ನನ್ನು ತಡೆಯುವುದರೊಳಗೆ ನಾನು ಎಲ್ಲರಿಗಿಂತ ಮುಂದೆ ನುಗ್ಗಿ, ಕೈಗೆ ಸಿಕ್ಕ ಮರಗಳನ್ನು ಹಿಡಿದುಕೊಂಡು, ಅಡ್ಡಡ್ಡವಾಗಿ ಇಳಿಯಲು ಶುರುಮಾಡಿದೆ. ಕೊನೆಯ ಹತ್ತು ಅಡಿ ಎಷ್ಟು ಕಡಿದಾಗಿತ್ತೆಂದರೆ, ನಾನು ಜಾಗ ನೋಡಿ ಒಂದು ಬಂಡೆಯ ಮೇಲೆ ಹಾರಿದೆ.

ಎದ್ದು ನಿಂತು ಎಡಗಡೆಗೆ ನೋಡಿದಾಗ, ಹಾಲಿನಂಥಹ ಬಿಳಿ ನೀರು ಬಂಡೆಗಳ ನಡುವಿನಿಂದ ನುಗ್ಗಿ ಬರುತ್ತಿತ್ತು. ಬಲಗಡೆಗೆ ಬಂಡೆಯ ನಡುವೆ ನುಗ್ಗಿ ಕಣ್ಮರೆಯಾಗುವ ನೀರು. ಅದರಿಂದಾಚೆಗೆ ಕಣ್ಣು ಹಾಯಿಸುವಷ್ಟು ದೂರವೂ ಬೆಟ್ಟಗಳ ಸಾಲು. ದೂರದಲ್ಲಿ ಆಕಾಶವೋ, ಸಮುದ್ರವೋ ಒಂದೂ ತಿಳಿಯದಂತ ದಿಗಂತ…..

ನಿಧಾನವಾಗಿ ಬಂಡೆಯ ತುದಿಗೆ ಬಂದು ನಿಂತೆ. ನೀರು ಬೀಳುತ್ತಿದ್ದ ಜಾಗ ಕಾಣುತ್ತಿರಲಿಲ್ಲ. ಆದರೆ, ಬೆಟ್ಟದ ಮಧ್ಯದಲ್ಲಿ ಹಾದು ಹೋಗುವ ರೈಲ್ವೇ ಹಳಿಯ ಮೇಲೆ ಗೋವಾದ ಕಡೆ ಹೋಗುತ್ತಿದ್ದ ರೈಲು ಮತ್ತು ಸೇತುವೆ ನಿಚ್ಚಳವಾಗಿ ಕಂಡಿತು. ಹಾಗೇ ಬಂಡೆಯ ಮೇಲೆ ಕುಳಿತುಕೊಂಡು, ಗಲ್ಲಕ್ಕೆ ಕೈ ಕೊಟ್ಟು, ಸುತ್ತಲಿನ ಹಸಿರು ಕಣಿವೆಯನ್ನೇ ದಿಟ್ಟಿಸುತ್ತಾ ಕುಳಿತೆ. ಹತ್ತು-ಹದಿನೈದು ನಿಮಿಷಗಳಾಗಿರಬಹುದು. ಬೆನ್ನ ಮೇಲೆ ಯಾವುದೋ ಕೈ ಬಿದ್ದಂತೆ ಅನ್ನಿಸಿ, ಹಿಂದೆ ತಿರುಗಿ ನೋಡಿದೆ.

ಹಿಂದೆ ನಿಂತಿದ್ದ ಸತೀಶ್: `ನೋಡಪ್ಪಿ, ನೀನು ಹಿಂಗೆಲ್ಲಾ ಮಾಡ್ದೇ ಹೊಗಿದ್ದರೆ, ನಾನು ಇಲ್ಲಿಗೆ ಬರ್ತಾನೇ ಇರ್ಲಿಲ್ಲ. ಎಂಥಾ ಜಾಗ ಮಿಸ್ ಮಾಡ್ಕೊಳ್ತಿದ್ನೋ? ದಾರಿ ಉದ್ದಕ್ಕೂ ನಿಂಗೆ ಬೈಕೊಂಡು ಬಂದೆ. ಹುಚ್ಚಾಟ ಅಂತ. ಇನ್ನು ನೀನು ಎಲ್ಲಿಗೆ ಕರ್ದ್ರೂ ಬರ್ತೀನಿ ಕಣ್ಲಾ,’ ಎಂದು ಹೇಳಿ, ನನ್ನ ಪಕ್ಕ ಕುಳಿತ. ಮುಂದಿನ ಹದಿನೈದು ನಿಮಿಷ, ನಾವಿಬ್ಬರೂ ಮೌನವಾಗಿ ಕಣಿವೆಯನ್ನು ದಿಟ್ಟಿಸುತ್ತಿದ್ದೆವು.

ಮಧ್ಯಾಹ್ನ ಅಲ್ಲಿಯೇ ಊಟ ಮಾಡಿ ಹೊರಟೆವು. ಅಷ್ಟರೊಳಗೆ, ಕಿರೀಟವನ್ನು ಮೆಟ್ಟಿ ನಿಲ್ಲಬೇಕೆಂಬ ನನ್ನ ಅಹಂಕಾರ ಮುರಿದು ಬಿದ್ದಿತ್ತು. ಪ್ರತಿಯೊಂದು ಸಲ ಪ್ರಕೃತಿಯ ಮಡಿಲಲ್ಲಿ ಕುಳಿತು ಬರುವಾಗ ಬರುವ ಧೈನ್ಯತಾ ಭಾವ ಇಲ್ಲೂ ಬಂದಿತ್ತು. ಹೊರಡುವ ಮುನ್ನ ಕಿರೀಟದ ಆ ಬಂಡೆಗಳಿಗೆ ಒಂದು ಸಾಷ್ಟಾಂಗ ನಮಸ್ಕಾರ ಹಾಕಿ ಹೊರಡುವಾಗ ಸತೀಶ್ ಕೇಳಿದ: `ಅದೇನು?’

ನಾನು ಮುಗುಳ್ನಕ್ಕೆ…

ವಿ.ಸೂ: ಇತ್ತೀಚೆಗೆ, ಕರ್ನಾಟಕ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ, ಇದೇ ದಾರಿಯಲ್ಲಿ ಚಾರಣ ಆರಂಭಿಸಿದರು ಎನ್ನುವ ಸುದ್ದಿ ಬಂದಿತ್ತು. ಆದರೆ, ಅದಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಗಿತ್ತು. ಹುಲಿ ಸಂರಕ್ಷಣೆ ಪ್ರದೇಶದಲ್ಲಿ ಚಾರಣ ಅಪಾಯಕಾರಿ ಮತ್ತು ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣದಿಂದ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button