ದೂರ ತೀರ ಯಾನಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ದುಬೈನಲ್ಲಿ ನಿರ್ಮಾಣಗೊಂಡಿದೆ ಜಗತ್ತಿನ ಅತಿ ಆಳವಾದ ಈಜುಕೊಳ

ಜಗತ್ತಿನ ಹೊಸ ನಗರವೊಂದು ದುಬೈನ ಆಳದ ಈಜುಕೊಳದಲ್ಲಿ ಸೃಷ್ಟಿಯಾಗಿದೆ. ಈ ಅದ್ಭುತ ನಗರದಲ್ಲಿ ಅನೇಕ ಅಚ್ಚರಿಗಳು ಅಡಗಿವೆ. ಈ ಈಜುಕೊಳಕ್ಕೆ “ಡೀಪ್ ಡೈವ್ ದುಬೈ” ಎಂದು ಹೆಸರಿಡಲಾಗಿದೆ.

  • ಚೈತ್ರಾ ರಾವ್ ಉಡುಪಿ

ದುಬೈನ ಅಲ್ ಶೆಬಾ ಪ್ರದೇಶದಲ್ಲಿ ಈ ಈಜುಕೊಳ ನಿರ್ಮಾಣವಾಗಿದೆ. 196 ಅಡಿ ಆಳವಿದ್ದು, ಡೈವಿಂಗ್ ಮಾಡುವವರಿಗೆ ಇದು ವಿಭಿನ್ನ ಅನುಭವವನ್ನು ನೀಡುತ್ತದೆ. ಏಕೆಂದರೆ ಇದು ಕೇವಲ ಈಜುಕೊಳ ಮಾತ್ರವಲ್ಲ. ಈಜಾಡಿಕೊಂಡು ಹೋದಂತೆ ಇನ್ನೊಂದು ಪ್ರಪಂಚಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.

ಈಜುಕೊಳದ ಆಳದಲ್ಲಿ ಮರಗಳು, ಕಟ್ಟಡಗಳು, ಗುಹೆಗಳು ಹಾಗೆ ಬೇರೆ ಬೇರೆ ರೀತಿಯ ಆಟಗಳನ್ನು ಆಡುವ ಸೌಕರ್ಯವನ್ನು ನೀಡಲಾಗಿದೆ. ಇನ್ನಷ್ಟು ಮುದನೀಡಲು, ವಿಭಿನ್ನ ವಾತಾವರಣ ಸೃಷ್ಟಿಸಲು ಕೊಳದೊಳಗೆ ಬೆಳಕು ಮತ್ತು ಧ್ವನಿ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಜೊತೆಗೆ ಫಿಲಂ ಸ್ಟುಡಿಯೋ ಕೂಡ ಇದೆ.

ಕೊಳದ ಕೆಳಭಾಗದಲ್ಲಿ ಜನರು ಚೆಸ್, ಟೇಬಲ್ ಟೆನ್ನಿಸ್ ಹಾಗೂ ಫುಟ್ಬಾಲ್ ಆಡಬಹುದು. ಈಜಾಡಿಕೊಂಡು ಆಡುವ ಆಟ ತುಂಬಾ ವಿಭಿನ್ನವಾದ ಅನುಭವವನ್ನು ನೀಡುವುದಂತೂ ಸತ್ಯ.

Deep Dive Dubai Worlds Deepest Swimming Pool

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆ

ದುಬೈನಲ್ಲಿ ನಿರ್ಮಾಣಗೊಂಡ ಈ ಆಳವಾದ ಈಜುಕೊಳ ವಿಶ್ವದ ಅತಿ ಆಳವಾದ ಈಜುಕೊಳವೆಂದು ದಾಖಲೆಯನ್ನು ಸೃಷ್ಟಿಸಿದೆ. ಜೂನ್ 27ರಂದು “ಪ್ರಪಂಚದ ಅತಿ ಆಳವಾದ ಡೈವಿಂಗ್ ಈಜುಕೊಳ” ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಮಾಣೀಕರಿಸಿದೆ.

ಈ ಹಿಂದೆ ಪೋಲಾಂಡ್ ನಲ್ಲಿರುವ ಡೀಪ್ ಸ್ಪಾಟ್ ಈಜುಕೊಳ ಅತಿ ಆಳವಾದ ಈಜು ಕೊಳವೆಂದು ದಾಖಲೆಯ ಪುಟದಲ್ಲಿ ಸೇರ್ಪಡೆಯಾಗಿತ್ತು. ಆದರೆ ಇದೀಗ ದುಬೈ ಈಜುಕೊಳ ಈ ದಾಖಲೆಯನ್ನು ಮುರಿದು ಆ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

ಸ್ಕೂಬಾ ಡೈವಿಂಗ್ ಸೌಲಭ್ಯ

ಈ ಈಜುಕೊಳಕ್ಕೆ ಇಳಿಯಬೇಕಾದರೆ ಸ್ಕೂಬಾ ಡೈವಿಂಗ್ ಅಗತ್ಯ. ಶಿಕ್ಷಣ ಮತ್ತು ಮನೋರಂಜನೆಗಾಗಿ ಈ ಒಳಾಂಗಣ ಸ್ಕೂಬಾ ಡೈವಿಂಗ್ ಸೌಲಭ್ಯವನ್ನು ನೀಡಲಾಗಿದೆ. ಹತ್ತು ವರ್ಷ ಮೇಲ್ಪಟ್ಟವರಿಗೆ ಡೀಪ್ ಡೈವಿಂಗ್ ಅನುಭವ ಗೊತ್ತಿರುವವರಿಗೆ ಮಾತ್ರ ಅನುಮತಿಯನ್ನು ನೀಡಲಾಗುತ್ತದೆ. ತೆಳುವಾದ ವೆಟ್ ಸೂಟ್ ಅಥವಾ ಈಜುಡುಗೆ ಧರಿಸಿ ಈಜಿದರೆ ಅನುಕೂಲವಾಗುತ್ತದೆ.

ನೀವುಇದನ್ನುಇಷ್ಟಪಡಬಹುದು: ಬೆಂಗಳೂರಿನಲ್ಲಿ ಭಾರತದ ಪ್ರಥಮ ಸುರಂಗ ಅಕ್ವೇರಿಯಂ

ಈಜುಕೊಳದಲ್ಲಿ 30 ಡಿಗ್ರಿ ಸೆಲ್ಸಿಯಸ್ (86 ಡಿಗ್ರಿ ಫ್ಯಾರನ್ ಹೀಟ್) ತಾಪಮಾನವನ್ನು ನಿರ್ವಹಿಸಲಾಗುತ್ತಿದೆ. ಹಾಗೆ ಒಳಾಂಗಣ ಈಜುಕೊಳವು 1500 ಚದರ ಮೀಟರ್ ಸಿಂಪಿ ಆಕಾರದಲ್ಲಿ (Oyster Shape) ರಚಿಸಲಾಗಿದೆ. 14 ಮಿಲಿಯನ್ ಲೀಟರ್ ನೀರು ಶೇಖರಣೆ ಮಾಡಲಾಗುತ್ತದೆ. ಸುಮಾರು 6 ಒಲಿಂಪಿಕ್ ಗಾತ್ರದ ಈಜುಕೊಳಗಳಿಗೆ ಸಮನಾಗಿ ಈ ಒಂದು ಈಜು ಕೊಳವಿದೆ. ಇದು ಒಳಭಾಗದಲ್ಲಿ ಕಟ್ಟಡ ಹಾಗೂ ಕಮಾನುಗಳನ್ನು ಒಳಗೊಂಡಿದೆ.

ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಿಂಪಿ ಆಕಾರದಲ್ಲಿ 56 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ತುರ್ತು ಪರಿಸ್ಥಿತಿ ಸಂಭವಿಸಿದಲ್ಲಿ 12 ಜನರಿಗೆ ಹೊಂದಿಕೊಳ್ಳುವಂತಹ ಹೈಪರ್ಬಾರಿಕ್  ಚೇಂಬರ್ ವ್ಯವಸ್ಥೆಯಿದೆ.

ಮೊದಲು ಈ ಆಳದ ಈಜುಕೊಳಕ್ಕೆ ಧುಮುಕಿದವರು

ದುಬೈನ ರಾಜ ಶೇಕ್ ಹಮ್ದಾನ್ ಬಿನ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಈ ಈಜು ಕೊಳಕ್ಕೆ ಭೇಟಿಕೊಟ್ಟು ಇದರೊಳಗೆ ಮೊದಲು ಧುಮುಕಿದ ವ್ಯಕ್ತಿ. ಹಾಗೇ ವಿಲ್ ಸ್ಮಿತ್ ಸೇರಿದಂತೆ ಇನ್ನೂ ಅನೇಕ ಗಣ್ಯರು ತಮ್ಮ ಡೈವ್ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದುಬೈನಲ್ಲಿರುವ ಈ ಈಜುಕೊಳವು ಪ್ರಸ್ತುತ ಕೇವಲ ಆಹ್ವಾನಿತರಿಗೆ ಮಾತ್ರ ತೆರೆಯಲಾಗಿದೆ. ಸಾರ್ವಜನಿಕರಿಗೆ ಈ ವರ್ಷದ ಕೊನೆಯಲ್ಲಿ ತೆರೆಯಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದೆ. ದುಬೈನ ಆಕರ್ಷಕ ತಾಣಗಳಗೆ ಇನ್ನುಮುಂದೆ ಇದೂ ಸೇರ್ಪಡೆಯಾಗಲಿದೆ. ಯಾಕೆಂದರೆ ನೀರೊಳಗೆ ಅಚ್ಚರಿ ಅಡಗಿದ ನಗರವಿದು. ಹಾಗಾಗಿ ದುಬೈಗೆ ತೆರಳಿದರೆ ಇಲ್ಲೊಮ್ಮೆ ಭೇಟಿ ನೀಡಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button