500 ಆನೆಗಳನ್ನು ಬೇಟೆಯಾಡಲು ಅನುಮತಿ ನೀಡಿದ ಜಿಂಬಾಬ್ವೆ: ಕೋವಿಡ್ ಕರುಣೆಯನ್ನೂ ಕೊಂದಿತೇ!
ಜಿಂಬಾಬ್ವೆ ಸರ್ಕಾರ ಅಲ್ಲಿನ ರಾಷ್ಟ್ರೀಯ ಉದ್ಯಾನವನಗಳ ಅಭಿವೃದ್ಧಿಗಾಗಿ 500 ಆನೆಗಳನ್ನು ಬೇಟೆಯಾಡಲು ಅನುಮತಿ ನೀಡಿದೆ. ಈ ನಿರ್ಧಾರವನ್ನು ಪರಿಸರ ಪ್ರೇಮಿಗಳೆಲ್ಲಾ ಒಕ್ಕೊರಲಿನಿಂದ ವಿರೋಧಿಸಬೇಕಿದೆ.
- ವರ್ಷಾ ಪ್ರಭು, ಉಜಿರೆ
ಮಾನವ ಮತ್ತು ವನ್ಯಜೀವಿ ತಿಕ್ಕಾಟ ಮುಗಿಯುವಂಥದ್ದೇ ಅಲ್ಲ. ಪರಿಸರ ತನ್ನ ಪಾಡಿಗೆ ತಾನಿದ್ದರೂ, ಮನುಷ್ಯ ಅದರ ನೆಮ್ಮದಿ ಕೆಡಿಸುವ ಯೋಜನೆಗಳಿಗೆ ಕೈ ಹಾಕುತ್ತಲೇ ಇರುತ್ತಾನೆ. ಆದರೆ ನಿಸರ್ಗ ಸಿಡಿದೆದ್ದಾಗ ತಾನು ಸುಮ್ಮನೆ ಶರಣಾಗುತ್ತಾನೆ. ಅದು ಅವನದ್ದೇ ಯೋಜನೆಗಳ ಪರಿಣಾಮವೆಂಬುದು ತಿಳಿದಾಗ, ಕಾಲ ಮಿಂಚಿ ಹೋಗಿರುತ್ತದೆ. ಪ್ರಳಯ, ಭೂಕಂಪ ಇದಕ್ಕೆಲ್ಲಾ ಉದಾಹರಣೆಗಳು. ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟು ಕೂಡಾ ಇದಕ್ಕೆ ಹೊರತಲ್ಲ!
ಕಣ್ಮುಂದೆ ಇಷ್ಟೆಲ್ಲಾ ಉದಾಹರಣೆಗಳಿದ್ದರೂ, ಆ ತಿಕ್ಕಾಟ ಮಂದುವರೆಸುವ ಚಪಲ ಮಾನವನಿಂದ ದೂರವಾಗಿಲ್ಲ. ಮತ್ತೂ ಮೂರ್ಖನಂತೆ ಪರಿಸರ ಮಾರಕ ಯೋಜನೆಗಳನ್ನು ಆತ ಜಾರಿಗೊಳಿಸಲು ಪ್ರಯತ್ನಿಸುತ್ತಲೇ ಇರುತ್ತಾನೆ.
ಸದ್ಯ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ಜಿಂಬಾಬ್ವೆ(Zimbabwe) ಸರ್ಕಾರ ಪರಿಸರ ವಿರೋಧಿ ಕಾನೂನು ಹೊರಡಿಸುವ ಮೂಲಕ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ವಿಶ್ವದ ಎರಡನೆಯ ಅತಿ ದೊಡ್ಡ ಆನೆಯಿರುವ ದೇಶ ಜಿಂಬಾಬ್ವೆ. ಆದರೀಗ ಅಲ್ಲಿಯ ಸರ್ಕಾರ ರಾಷ್ಟ್ರೀಯ ಉದ್ಯಾನವನಗಳ ಅಭಿವೃದ್ಧಿಗಾಗಿ 500 ಆನೆಗಳನ್ನು ಬೇಟೆಯಾಡಲು ಅನುಮತಿ ನೀಡಿದೆ. ಅದಲ್ಲದೆ ಪ್ರತಿ ಪ್ರಾಣಿಗೆ $70,000 ನಿಗದಿ ಮಾಡಿ ಮಾರಾಟ ಮಾಡಲು ನಿರ್ಧರಿಸಿದೆ.
ನೀವು ಇದನ್ನು ಇಷ್ಟಪಡಬಹುದು: ಟೆಕ್ಕಿಯಾಗಿದ್ದ ಹುಡುಗ ಈಗ ವೈಲ್ಡ್ ಲೈಫ್ ಫೋಟೋಗ್ರಾಫರ್: ಮೂಡಿಗೆರೆಯ ಸುನೀಲ್ ಸಚಿಯವರ ಕುತೂಹಲಕರ ಕತೆ
ವಿದೇಶಿ ಪ್ರವಾಸಿಗರ ಬೇಟೆಯ ಮೋಜು
ದಕ್ಷಿಣ ಗೋಳಾರ್ಧದ ಚಳಿಗಾಲದಲ್ಲಿ ನಡೆಯುವ ಈ ಬೇಟೆ, ಈ ವರ್ಷ ಪುನರಾರಂಭಗೊಳ್ಳಲಿದೆ. ಕೋವಿಡ್ ಬಿಕ್ಕಟ್ಟಿನ ಕಾರಣದಿಂದ 2020ರಲ್ಲಿ ವಿದೇಶಿ ಪ್ರವಾಸಿಗರು ಬೇಟೆಯಾಡುವುದನ್ನು ನಿಲ್ಲಿಸಲಾಗಿತ್ತು.
ಜಿಂಬಾಬ್ವೆಯ ನೆರೆಯ ದೇಶ ಬೋಟ್ಸ್ವಾನದ ಅನಂತರ “ಅತಿ ಹೆಚ್ಚು ಆನೆಗಳಿರುವ ದೇಶ’ ಎಂಬ ಕೀರ್ತಿ ಜಿಂಬಾಬ್ವೆಗೆ ಸಲ್ಲುತ್ತದೆ. ಆದರೆ ಆನೆ ಬೇಟೆಯಿಂದ ಲಾಭ ಪಡೆಯುವ ವಿಚಿತ್ರ ಮತ್ತು ಹೃದಯವಿದ್ರಾವಕ ಯೋಜನೆಗೆ ಈಗ ಎಲ್ಲೆಡೆಯಿಂದ ವಿರೋಧ ಕೇಳಿಬಂದಿದೆ. ಪರಿಸರ ಪ್ರೇಮಿಗಳು ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಬೋಟ್ಸ್ವಾನ ತನ್ನ ಐದು ವರ್ಷಗಳ ಬೇಟೆ ನಿಷೇಧಾಜ್ಞೆಯನ್ನು ಹಿಂಪಡೆದುಕೊಂಡು, ಮತ್ತೆ ಅವಕಾಶ ಕಲ್ಪಿಸಿದೆ. ಇದು ಅವರನ್ನು ಇನ್ನಷ್ಟು ಕೆರಳಿಸಿದೆ.
ಜಿಂಬಾಬ್ವೆ ಉದ್ಯಾನವನ ಮತ್ತು ವನ್ಯಜೀವಿ ನಿರ್ವಹಣಾ ಪ್ರಾಧಿಕಾರದ ವಕ್ತಾರ ತಿನಾಶೆ ಪರಾವೋ, “ನಮ್ಮ ಕಾರ್‍ಯಾಚರಣೆಯ ಮತ್ತು ಕಾರ್ಮಿಕರ ಖರ್ಚುವೆಚ್ಚವನ್ನು ನಾವು ನೋಡಿಕೊಳ್ಳುವುದು ಹೇಗೆ? ನಮ್ಮ ಕಾರ್‍ಯಾಚರಣೆಯನ್ನು ವಿರೋಧಿಸುವವರು ಪ್ರಾಣಿ ಮತ್ತು ಕಾರ್ಮಿಕರ ನಿರ್ವಹಣೆಗೆ ಹಣ ನೀಡಿ’ ಎಂದಿದ್ದಾರೆ.
ಆನೆಗಳನ್ನು ಬೇಟೆಯಾಡುವುದು, ಅವಕ್ಕೆ ಗುಂಡು ಹಾರಿಸುವುದು ಸುಲಭದ ಮಾತಲ್ಲ. ಅದರ ಗಾತ್ರಕ್ಕನುಗುಣವಾಗಿ $10,000 $70,000 ಖರ್ಚಾಗಲಿದೆ. ಉದ್ಯಾನವನಗಳ ಪ್ರಾಧಿಕಾರವು ಸ್ವಯಂ ಧನಸಹಾಯ ಮಾಡಿಕೊಳ್ಳಬಲ್ಲ ಶಕ್ತಿಯನ್ನು ಹೊಂದಿತ್ತು. ಆದರೆ ಪ್ರವಾಸಿಗರ ಸಂಖ್ಯೆಯಲ್ಲಿನ ಕುಸಿತ ಪ್ರಾಧಿಕಾರಕ್ಕೆ ಆರ್ಥಿಕ ಹೊಡೆತ ನೀಡಿದೆ. ಹೀಗಾಗಿ ಆಗಾಗ್ಗೆ ಭೇಟಿ ನೀಡುವ ಫೋಟೋ ಸಫಾರಿ ಪ್ರವಾಸಿಗರಿಂದ ಕಡಿಮೆ ದರದಲ್ಲಿ ಈ ಬೇಟೆಯಾಡುವುದನ್ನು ಚಿತ್ರೀಕರಿಸಲಾಗುತ್ತದೆ.
ಜಿಂಬಾಬ್ವೆಯಲ್ಲಿ 1 ಲಕ್ಷಕ್ಕೂ ಮಿಕ್ಕಿ ಆನೆಗಳಿವೆ. ಬೆಳೆ ಹಾನಿ, ಆನೆ ಬೇಟೆ ಮುಂತಾದ ಕಾರಣಗಳು ಸೇರಿ ಹಲವು ಆನೆಗಳು ಸಾಂದರ್ಭಿಕ ಸಾವನ್ನಪ್ಪಿವೆ. ಕೆಲವೊಮ್ಮೆ ಆನೆ ದಾಳಿಯಿಂದ ಜನತೆಯೂ ಸಾವನ್ನಪ್ಪಿದ್ದಾರೆ. 2021ರಲ್ಲಿ ಈ ಕುರಿತು 1 ಸಾವಿರ ದೂರುಗಳನ್ನು ಪ್ರಾಧಿಕಾರ ಸ್ವೀಕರಿಸಿದೆ. 2020ಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ದೂರುಗಳು ದಾಖಲಾಗಿವೆ. 2020ರಲ್ಲಿ 1,500 ದೂರುಗಳು ದಾಖಲಾಗಿದ್ದವು.
ಯು.ಎಸ್.ಎ, ಮೆಕ್ಸಿಕೋ,(Mexico) ರಷ್ಯಾ, ಇ.ಯುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೇಟೆಗಾರರು ಜಿಂಬಾಬ್ವೆ ಕಡೆಗೆ ಧಾವಿಸುತ್ತಾರೆ. ಆನೆ ಬೇಟೆಯಾಡುವ ಪರವಾನಗಿ ಜೊತೆಗೆ ವೃತ್ತಿಪರ ಬೇಟೆಗಾರರಿಂದ ಮಾರ್ಗದರ್ಶನವನ್ನೂ ನೀಡಲಾಗುತ್ತದೆ. ಆನೆ ಚರ್ಮಕ್ಕೆ ಚರ್ಮ ಪ್ರಸಾದಕನಿಂದ ಚಿಕಿತ್ಸೆ ದೊರೆತ ಮೇಲೆ ತಮ್ಮ ಸ್ವದೇಶಕ್ಕೆ ಮರಳುತ್ತಾರೆ.
ಇದು ಜಿಂಬಾಬ್ವೆ ಸರ್ಕಾರ ಹೊರಡಿಸಿದ ವಿಚಿತ್ರ ಕಾನೂನು. ಕೇವಲ ಉದ್ಯಾನವನದ ಅಭಿವೃದ್ಧಿಗಾಗಿ ಪ್ರಾಣಿ ಬಲಿ ನೀಡುವುದು ಎಷ್ಟು ಸರಿ? ಎಂದು ಪರಿಸರವಾದಿಗಳು, ಜನತೆ ಪ್ರಶ್ನಿಸುತ್ತಿದ್ದಾರೆ. ಆದರೆ ಮೌನವೇ ಅದಕ್ಕೆ ಉತ್ತರವಾಗಿದೆ. ಮಾನವ- ನಿಸರ್ಗದ ಈ ಸಂಘರ್ಷ ಯಾವ ಹಂತವನ್ನು ತಲುಪಬಹುದೆಂಬುದನ್ನು ನಾವು ಊಹಿಸಲಾರೆವು ಕೂಡಾ! ಹಾಗಾಗಿ ಈ ಪರಿಸರ ಮಾರಕ ಯೋಜನೆ ನಿಲ್ಲಲಿ ಮತ್ತು ಮುಂದೆ ಇಂತಹ ಯೋಜನೆಗಳು ಜಾರಿಯಾಗದಿರಲಿ ಎಂಬುದು ನಮ್ಮೆಲ್ಲರ ಆಶಯ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ