ವಂಡರ್ ಬಾಕ್ಸ್

ನನ್ನೂರು ಶೃಂಗೇರಿ, ಒಮ್ಮೆ ಬಂದು ಹೋಗಿ: ವಿಭಾ ಬರೆದ ಒಂದೂರಿನ ಆತ್ಮಕತೆ

ಪೂರ್ತಿ ಹೆಸರು ವಿಭಾ ಎಂ ಢೋಂಗ್ರೆ. ಹುಟ್ಟೂರು ಶೃಂಗೇರಿ. ಪ್ರಸ್ತುತ ಶಿವಮೊಗ್ಗದ ಕಾಲೇಜೊಂದರಲ್ಲಿ ಉಪನ್ಯಾಸಕಿ. ಓದುವುದು ಇಷ್ಟ. ಬರೆಯುವುದು ಸ್ವಲ್ಪ ತಡ. ಆದರೆ ಬರೆದರೆ ಓದಿಸಿಕೊಂಡು ಹೋಗುವಂತೆ ಬರೆಯುತ್ತಾರೆ. ರಂಗಭೂಮಿ ಇವರ ಮತ್ತೊಂದು ಪ್ರೀತಿ. ಈ ಜೀವನೋತ್ಸಾಹಿ ಜೀವನದ ಮೇಲೆ ಪ್ರೀತಿ ಉಕ್ಕುವಂತೆ ಬರೆಯುತ್ತಾರೆ ಅನ್ನುವುದೇ ಇವರ ಹೆಚ್ಚುಗಾರಿಕೆ.   

“ರಜಕ್ಕೆ ಊರಿಗೆ ಹೋಗ್ತಾ ಇದೀನಿ” ಎಂದು ನಮ್ಮ ಬಾಸ್ ಹತ್ತಿರವೋ ಅಥವಾ ಸ್ನೇಹಿತರಿಗೂ ಹೇಳುವಾಗ ಅದ್ಯಾವುದೋ ಗೊತ್ತಿಲ್ಲದ ಮೂಲೆಯಿಂದ ಬಂದ ಮಂದಹಾಸವೊಂದು ನಮ್ಮ ಕೆನ್ನೆಯನ್ನು ಹಿಗ್ಗಿಸಿ ಬಿಡುತ್ತೆ. ಇಂಥ ನಗುವಿನೊಂದಿಗೆ ಹೊರಟ ಊರಿನ ದಾರಿಯು ಕೆಲವರಿಗೆ “ನೇಟಿವ್_ ಹೋಂ ಟೌನ್” ಎಂಬ ತೋರಿಕೆಯ ಸಾಧನವಾದರೆ, ಕೆಲವರಿಗೆ ಇದೇ ದಾರಿ ಸುಮ್ಮನೆ ಗಾಳಿಗೆ ಮುಖ ಕೊಟ್ಟು ದೊಡ್ಡ ಜಗತ್ತನ್ನು ಚಿಕ್ಕ ಕಂಗಳಲ್ಲಿ ತುಂಬಿಕೊಳ್ಳುವ ಮಾರ್ಗವಾಗುತ್ತದೆ. 

ಅಭಿಲಾಷ್ ಎಸ್ ಭಟ್

ನನ್ನ ಹುಟ್ಟೂರು ಶೃಂಗೇರಿ(Sringeri). ಒಂದಷ್ಟು ಬೆಳಕೂ ಇಣುಕದಂಥ ಕಾಡೊಳಗಿನ ಹಳ್ಳಿಗಳನ್ನು ಒಳಗೊಂಡ ಪುಟ್ಟ ಜಗತ್ತು. ವಿದ್ಯಾದೇವತೆ ಶಾರದೆಯ ಶಾಂತ ದೇವಾಲಯ, ಪಾವನ ತುಂಗೆ, ಜಂಭದಿಂದ ಝರಿವ ಸಿರಿಮನೆ-ಮಘೇಬೈಲು ಜಲಪಾತಗಳು, ಬೆಟ್ಟದ ಮಲ್ಲಿಕಾರ್ಜುನ, ಕಿಗ್ಗದ ಋಷ್ಯಶೃಂಗ- ಇವೆಲ್ಲವೂ ಒಬ್ಬ ಪ್ರವಾಸಿಯ ಕಣ್ಣಿಗೆ ಕಾಣಬಹುದಾದ ಶೃಂಗೇರಿಯ ಪ್ರಾಕ್ಟಿಕಲ್ ಸೊಬಗು. ಆದರೆ ನನ್ನೂರು “ಅಗೆದಷ್ಟೂ ಸಿಗಬಹುದಾದ ನೆಮ್ಮದಿಯ ಖನಿ” ಎಂದು ನಿಮಗೆ ತಿಳಿದಿರಲಿಕ್ಕಿಲ್ಲ. 

ಶೃಂಗೇರಿಯ ಒಂದು ಮುಖ್ಯ ಬೀದಿ. ಅದೇ ನಮಗೆ ಪೇಟೆ. ನಮ್ಮ ಪಾಲಿಗೆ ಅದೇ ‘ಶಾಪಿಂಗ್ ಕಾಂಪ್ಲೆಕ್ಸ್’. ಊರಿನ ಪೊಲೀಸ್ ಸ್ಟೇಷನ್ನು, 2-3 ಬ್ಯಾಂಕು, ಪೆಟ್ರೋಲ್ ಬಂಕು, ಸಂತೆ ಮಾರ್ಕೆಟ್ಟು, ಆಟೋ ಸ್ಟ್ಯಾಂಡು, ಬಸ್ಟಾಪು, ಒಂದಷ್ಟು ಶತಮಾನ ಕಂಡ ಅಂಗಡಿಗಳು… ಎಲ್ಲವೂ ಅದೇ ಬೀದಿಯಲ್ಲಿ ಜನರೆಲ್ಲರೂ ವಾರಕ್ಕೊಮ್ಮೆಯೊ-ತಿಂಗಳಿಗೊಮ್ಮೆಯೋ  “ಸಾಮಾನು ಚೀಟಿ” ಮಾಡಿ, ಆ ಪ್ರಕಾರ ಪೇಟೆಗೆ ಹೋಗಿ ದಿನಸಿ ತಂದು ಅಭ್ಯಾಸ. ಹೀಗೆ ಪೇಟೆಗೆ ಹೋದವರು ಮಠಕ್ಕೆ ಹೋಗಿ ಊಟ ಮಾಡಿ ಅಭ್ಯಾಸ. ಹಸಿದವರನ್ನು ಎಂದಿಗೂ ಶೃಂಗೇರಿಯ ಮಠ ಕೈ ಬಿಟ್ಟಿಲ್ಲ. ಕಾಲೇಜು ಹುಡುಗರ ಹಾರಾಟಗಳು ಇಲ್ಲಿ ಅತಿ ವಿರಳ. ಶಿಸ್ತು, ಸಂಯಮ, ಸಾಮರಸ್ಯಕ್ಕೆ ನನ್ನೂರು ಉಪಮೇಯ. 

ನೀವು ಇದನ್ನು ಇಷ್ಟಪಡಬಹುದು: ಜಗತ್ತಿನಲ್ಲಿ 195 ದೇಶಗಳಲ್ಲಿ 186 ದೇಶ ಸುತ್ತಿ ಬಂದಿರುವ ರವಿ ಪ್ರಭು

ಇಲ್ಲಿನ ಪೇಟೆ “ಸ್ಮಾಲ್ ಈಸ್ ಬ್ಯೂಟಿಫುಲ್” ಅನ್ನುವ ದೊಡ್ಡ ತತ್ವವನ್ನು ನಮಗೆ ಅರ್ಥ ಮಾಡಿಸಿ ಕೊಟ್ಟರೆ. ಒಳ ಕಾಡಿನ ಹಳ್ಳಿಗಳು “ಸ್ಮಾಲ್ ಇಸ್ ಬಿಗ್” ಅನ್ನೋದನ್ನ ಅರ್ಥ ಮಾಡಿಸುತ್ತವೆ. ನಮ್ಮ ಜಿಯೋ, ಏರ್ಟೆಲ್, ಇತ್ಯಾದಿಗಳ ಹಾವಳಿ ಇಲ್ಲಿಲ್ಲ. ಹೀಗಾಗಿ ಹಳ್ಳಿಯ ಮನೆಗಳಿಗೆ ಹೋದರೆ ನಮ್ಮ ಫೋನಿಗೆ ಸಂಪೂರ್ಣ ವಿಶ್ರಾಂತಿ. ದನಗಳ ಕೂಗು, ಕರುಗಳ ಚೇಷ್ಟೇ, ಅಡಿಕೆ ಹಂಡೆಗೆ ಬೆನ್ನೊಡ್ಡಿ ಕೂರುವಂತೆ ಮಾಡುವ ಚುಮುಚುಮು ಚಳಿ, ಮಳೆಗಾಲದಲ್ಲಿ ನಮ್ಮ ಮೈಕೈ ಗೇಣು ಹಾಕುವ ಇಂಬಳ, ಅಗ್ಗಿಷ್ಟಿಕೆಯ ಮೇಲೆ ಸದಾ ಕುದಿವ ಬೆಲ್ಲದ ಕಾಫಿ ಮತ್ತು ಕ್ಷಣ ಬಿಡುವಿಲ್ಲದೆ ದುಡಿವ, ಹೊರಜಗತ್ತಿನ ವ್ಯಾಜ್ಯಗಳಿಗೆ ಎಂದೂ ತಲೆ ಹಾಕದ ತೃಪ್ತ ಊರಿಗರು. 

ನನ್ನೂರು ನಾನು ರೂಢಿಸಿಕೊಂಡಿರುವ ಹಲವು ನಿಲುವುಗಳಿಗೆ ಮೂಲ. ಇಲ್ಲಿನ ಜನರು ಇರುವುದರಲ್ಲೇ ತೃಪ್ತರಾಗಿ ಎಷ್ಟು ಸಂತೋಷದಿಂದ ಜೀವನ ನಡೆಸುತ್ತಾರೆ! ಆಧುನಿಕತೆಯನ್ನು ಸದಾ ಒಪ್ಪಿದರೂ ಸಂಸ್ಕೃತಿಯನ್ನು ಅವಮಾನಿಸದಂತೆ ನಡೆಯುತ್ತಾ ಎಷ್ಟು ಪ್ರೌಢಿಮೆ ತೋರಿಸುತ್ತಾರೆ. ಬಹುಶಃ ಇದು ನಾವು ಲೋಕಕ್ಕೆ ಸಾರಬಹುದಾದ ನೀತಿ.

ನೀವ್ಯಾರೇ ಶೃಂಗೇರಿಗೆ ಬಂದರೂ ಒಂದೆರಡು ದಿನ ಬಿಡುವು ಮಾಡಿಕೊಳ್ಳಿ. ಪೇಟೆಯನ್ನೂ-ಹಳ್ಳಿಯನ್ನೂ  ಸುತ್ತಿ. ಬದುಕನ್ನು ಬಹಳ ಬೇಗ ಸರಳೀಕರಿಸಿಕೊಳ್ಳುವ ಉಪಾಯ ಸಿಗಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

One Comment

Leave a Reply

Your email address will not be published. Required fields are marked *

Back to top button